ಗಣೇಶ ಶಂಕರ ವಿದ್ಯಾರ್ಥಿ ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದವರು. ಅವರು ಜೀವಿಸಿದ್ದ ಅಲ್ಪ ಸಮಯದಲ್ಲೇ ಸಮಾಜದಲ್ಲಿ ಮಡುಗಟ್ಟಿದ್ದ ಅನ್ಯಾಯದ ವಿರುದ್ಧ ಹೋರಾಟಮಾಡಿದರು. ಪತ್ರಿಕೋದ್ಯಮದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ವಿದ್ಯಾರ್ಥಿ ಹಿಂದಿ ದೈನಿಕ ಪ್ರತಾಪ್‌ದ ಸ್ಥಾಪಕರೂ ಹೌದು. ಗಾಂಧೀಜಿಯವರ ಪ್ರಭಾವಕ್ಕೆ ಸಿಕ್ಕು ಬ್ರಿಟಿಷರ ವಿರುದ್ಧ ಹೋರಾಡಿದ ವಿದ್ಯಾರ್ಥಿ ಅನೇಕ ಬಾರಿ ಜೈಲು ವಾಸವನ್ನೂ ಅನುಭವಿಸಿದ್ದರು. ಗಾಂಧೀಜಿ ತಮ್ಮ 'ಯಂಗ್ ಇಂಡಿಯಾ' ಪತ್ರಿಕೆಯಲ್ಲಿ ವಿದ್ಯಾರ್ಥಿಯ ಶೌರ್ಯ, ಅವರು ಸಲ್ಲಿಸಿದ ಸೇವೆ ಕುರಿತು ಪ್ರಶಂಶಾತ್ಮಕ ಲೇಖನ ಬರೆದಿದ್ದರು.
ಒಮ್ಮೆ ಕಾನ್ಪುರದಲ್ಲಿ ಗಲಭೆ ಪ್ರಾರಂಭವಾಯಿತು. ಅದರಲ್ಲಿ ಅನೇಕ ಅಮಾಯಕರು ಕಷ್ಟನಷ್ಟಗಳಿಗೆ ಒಳಗಾದರು. ಅಂಗಡಿ ಮುಂಗಟ್ಟುಗಳನ್ನು ದೋಚಲಾಯಿತು. ಕೆಲವು ಅಂಗಡಿಗಳಿಗೆ ಬೆಂಕಿ ಇಡಲಾಯಿತು. ಅನೇಕ ಸಾವುನೋವುಗಳೂ ಆದವು. ಜನ ಭಯಭೀತರಾಗಿ ಮನೆಯೊಳಗೆ ಹೋಗಿ ಅಡಗಿಕೊಂಡರು. ವಿದ್ಯಾರ್ಥಿ ಇವನ್ನೆಲ್ಲಾ ನೋಡಿ ತುಂಬಾ ನೊಂದುಕೊಂಡರು. ಜನರಲ್ಲಿ ಆತ್ಮ ಸ್ಥೈರ್ಯ ತುಂಬಲು ನಿರ್ಧರಿಸಿ ಹಿಂಸಾಚಾರಕ್ಕೆ ತುತ್ತಾಗಿದ್ದ ಪ್ರದೇಶಗಳಲ್ಲಿ ಒಂಟಿಯಾಗಿ ತಿರುಗುತ್ತಿರುವಾಗ ಬಲಿಷ್ಟನಾದ ಒಬ್ಬ ವ್ಯಕ್ತಿ ಚಪ್ಪಲಿ ಅಂಗಡಿಯ ಬೀಗ ಮುರಿದು ಚೀಲದಲ್ಲಿ ಬೆಲೆಬಾಳುವ ಪಾದರಕ್ಷೆಗಳನ್ನು ತುಂಬಿಕೊಂಡು ಹೋಗುತ್ತಿದ್ದುದನ್ನು ನೋಡಿ ಅವನನ್ನು ಹಿಡಿಯಲು ಅವನ ಹಿಂದೆಯೇ ಓಡಿದರು. ಕೊನೆಗೆ ಅವನು ತೆಳು ದೇಹದ ಗಣೇಶ ಶಂಕರರಿಗೆ ಸಿಕ್ಕು ಬಿದ್ದಾಗ ಅವರು ಹೇಳಿದರು, ಇಂತಹ ಹೀನಾಯ ಕೆಲಸ ಮಾಡಲು ನಿನಗೆ ನಾಚಿಕೆಯಾಗುವುದಿಲ್ಲವೆ? ದಂಗೆಕೋರರು ಮಾಡುವ ಕೃತ್ಯವನ್ನು ನೀನು ಖಂಡಿಸುವ ಬದಲು, ನೀನೇ ದರೋಡೆ ಮಾಡುವುದು ಸರಿಯಲ್ಲ ಎಂದು ಗದರಿಸಿದರು. ಆ ಬಲಾಢ್ಯ ವ್ಯಕ್ತಿ ಮನಸ್ಸು ಮಾಡಿದ್ದರೆ ಒಂದೇ ಏಟಿಗೆ ಈ ಕೃಶಕಾಯ ವಿದ್ಯಾರ್ಥಿಯನ್ನು ಎತ್ತಿ ಒಗೆಯಬಹುದಾಗಿತ್ತು. ಆದರೆ ಅವನು ಭಯದಿಂದ ನಡುಗುತ್ತಿದ್ದನು. ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. ನಾಚಿಕೆಯಿಂದ ತಲೆತಗ್ಗಿಸಿ ನಿಂತುಬಿಟ್ಟನು. ತಾನು ತಂದಿದ್ದ ಪಾದರಕ್ಷೆಗಳನ್ನು ವಿದ್ಯಾರ್ಥಿಯ ಸಲಹೆಯ ಮೇರೆಗೆ ಅದು ಎಲ್ಲಿತ್ತೋ ಅಲ್ಲಿಗೆ ಸೇರಿಸಿ ತನ್ನನ್ನು ಕ್ಷಮಿಸುವಂತೆ ಕೇಳಿಕೊಂಡನು. ಇದನ್ನೆಲ್ಲಾ ನೋಡುತ್ತಿದ್ದ ಜನರಲ್ಲಿ ಒಬ್ಬ ಮುಂದೆ ಬಂದು, ಇಂತಹ ಬಲಾಢ್ಯನನ್ನು ಎದುರಿಸುವಾಗ ನಿಮಗೆ ಭಯವಾಗಲಿಲ್ಲವೆ ಎಂದು ಪ್ರಶ್ನಿಸಿದ. ಅದಕ್ಕೆ ವಿದ್ಯಾರ್ಥಿ ಹೇಳಿದರು, ದುರ್ಬಲ ಮನಸ್ಸಿನವನ ಬಳಿ ಎಷ್ಟೇ ದೇಹಶಕ್ತಿ ಇದ್ದರೂ ಆತ್ಮ ವಿಶ್ವಾಸ ಕುಂದಿ ನಿರ್ವೀರ್ಯನಾಗುತ್ತಾನೆ. ಅಲ್ಲದೆ ಸದಾ ತಪ್ಪು ಮಾಡುತ್ತಿರುತ್ತಾನೆ. ಇಷ್ಟೊಂದು ಜನ ನೀವಿಲ್ಲಿದ್ದೀರಿ, ನಿಮಗಿರುವ ದುರ್ಬಲ ಮನಸ್ಸಿನಿಂದಾಗಿ ನೀವಾರೂ ಅನ್ಯಾಯವನ್ನು ಎದುರಿಸಲಾಗಲಿಲ್ಲ ಎಂದು ಮೂದಲಿಸಿದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ