ಸಂಪಾದಕೀಯ

ಆದರ್ಶ ರಾಜಕಾರಣಿ ಮಠಾಧಿಪತಿಯಾದದ್ದು

ಹೆಬ್ಬಣಿ ಭೀಮಾಚಾರ್ಯರು ಅಪ್ಪಟ ಕಾಂಗ್ರೆಸಿಗರಾಗಿ ರಾಜಕಾರಣದಲ್ಲಿ ವಿಶೇಷ ಗಮನ ಸೆಳೆದಿದ್ದರು. ಮುಳುಬಾಗಿಲಿನ ಜನರಿಗೆ ಅವರು ಅಚ್ಚುಮೆಚ್ಚು. ಧಾರ್ಮಿಕ ಐಕ್ಯಮತ್ಯ ಮತ್ತು ಸಮಾಜ ಸಾಮರಸ್ಯ ಸಾಧಿಸುವಲ್ಲಿ ಅವರ ಶ್ರಮ ಹೆಚ್ಚು. ಮುಸ್ಲಿಂ ಜನಾಂಗದ ಮುಖಂಡ ರಫೀಕ್ ಅಹಮದ್‌ರವರು ಪ್ರತಿವರ್ಷ ತಿರುಪತಿಯ ಕಲ್ಯಾಣೋತ್ಸವಕ್ಕೆ ಹೋಗಿ ಬರುವ ಸಂಪ್ರದಾಯವನ್ನು ಅನುಸರಿಸುತ್ತಿದ್ದುದು ಭೀಮಾಚಾರ್ಯರ ಪ್ರಭಾವದಿಂದ. ಮುಳುಬಾಗಿಲು ಪುರಸಭೆಯ ಅಧ್ಯಕ್ಷರಾಗಿದ್ದಾಗ 1980ರಲ್ಲಿ ಉತ್ತಮ ಆಡಳಿತಕ್ಕಾಗಿ ರಾಜ್ಯ ಪ್ರಶಸ್ತಿ ಬಂದಿತ್ತು. ಅವರ ಪ್ರಕಾರ ಪ್ರಾಮಾಣಿಕ ಮತ್ತು ತತ್ವಬದ್ಧ ರಾಜಕಾರಣಿ ಮುಂದಿನ ತಲೆಮಾರಿನ ಭವಿತವ್ಯ ಕುರಿತು ಸದಾ ಚಿಂತಿಸುತ್ತಾನೆ ಅವನಿಗೆ ಮುಂದಿನ ಚುನಾವಣೆ ದೊಡ್ಡದೆನಿಸುವುದೇ ಇಲ್ಲ. ಅವರಿಗೆ ನಿಟ್ಟೂರು ಶ್ರೀನಿವಾಸರಾಯರು. ಡಿ.ವಿ.ಜಿ, ವಿ.ಸೀ, ಎಲ್ ಗುಂಡಪ್ಪ, ತಿ.ತಾ.ಶರ್ಮ, ಗೊರೂರರು ಮುಂತಾದ ದಿಗ್ಗಜರೊಡನೆ ನಿಕಟ ಸಂಪರ್ಕವಿತ್ತು.
ಮೊದಲ ಬಾರಿಗೆ 1958-59ರಲ್ಲಿ ಮುಳುಬಾಗಿಲಿನಲ್ಲಿ ನೀರಿಗಾಗಿ ಹಾಹಾಕಾರ ಎದ್ದಿತು. ಆಗ ಸರ್ಕಾರದೊಡನೆ ಪತ್ರವ್ಯವಹಾರ ನಡೆಸಿ ಕೊನೆಗೂ ಕುಡಿಯುವ ನೀರಿನ ಯೋಜನೆಗೆ ಸರ್ಕಾರದ ಅನುಮೋದನೆ ಪಡೆಯಲಾಯಿತು. ಆದರೆ ನೀರಿನ ಶೇಖರಣೆಗೆ ಮುಳುಬಾಗಿಲಿನಲ್ಲಿ ಯೋಗ್ಯ ನಿವೇಶನ ದೊರೆಯದೆ ಅನುದಾನ ವಾಪಸ್ಸು ಹೋಗುವ ಸ್ಥಿತಿ ಮುಟ್ಟಿತು. ಆಗ ಭೀಮಾಚಾರ್ಯರು ತಮ್ಮ ಮನೆಯ ಹಿಂಭಾಗದ ವಿಶಾಲ ಜಾಗವನ್ನೇ ಈ ಕಾರ್ಯಯೋಜನೆಗೆ ಬಿಟ್ಟು ಕೊಟ್ಟು, ನೀರಿನ ಯೋಜನೆ ಜಾರಿಯಾಗಲು ಕಾರಣರಾದರು. ಮುಳುಬಾಗಿಲಿಗೆ ಸರ್ಕಾರಿ ಕಾಲೇಜು ಸ್ಥಾಪನೆಗೂ ಮೂಲ ಕಾರಣರಾಗಿ, ಬಸ್ ನಿಲ್ದಾಣಕ್ಕೆ, ಶ್ರೀಪಾದರಾಜ ಮಠದ ಜಮೀನು ಬಿಟ್ಟುಕೊಟ್ಟಿದ್ದು ಹೀಗೆ ನೂರಾರು ಕಾಮಗಾರಿ ಮತ್ತು ನಿರ್ಮಾಣ ಕಾರ್ಯಗಳನ್ನು ಆಚಾರ್ಯರು ಮಾಡಿಕೊಟ್ಟಿದ್ದಾರೆ. ಇಂತಹ ಪರಿಶುದ್ಧ ಮತ್ತು ಪ್ರಾಮಾಣಿಕರಾದ ಆಚಾರ್ಯರ ಮೇಲೆ ದುರಾತ್ಮರು ಸರ್ಕಾರಕ್ಕೆ ಮೂಕರ್ಜಿ ಬರೆದು ಪುರಸಭಾಧ್ಯಕ್ಷರಾಗಿದ್ದ ಆಚಾರ್ಯರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದರು. ಇದರಂತೆ ಸರ್ಕಾರದ ತಪಾಸಣಾ ತಂಡ ಮುಳುಬಾಗಿಲಿಗೆ ಆಗಮಿಸಿ ಎಲ್ಲ ಲೆಕ್ಕಪತ್ರಗಳನ್ನೂ, ಆಚಾರ್ಯರು ಮಾಡಿಸಿದ ಕಾಮಗಾರಿಗಳನ್ನೂ ಪರಿಶೀಲಿಸಿ ನೋಡಿದಾಗ ಪ್ರತಿಯೊಂದು ಕೆಲಸದಲ್ಲಿಯೂ ಅವರ ಪ್ರಾಮಾಣಿಕತೆಯನ್ನು ಕಂಡು ಆಚಾರ್ಯರಿಗೆ ಸಾಷ್ಟಾಂಗ ನಮಸ್ಕರಿಸಿ ತಮ್ಮನ್ನು ಕ್ಷಮಿಸಲು ಕೇಳಿಕೊಂಡರು. ಮುಂದೆ ಭೀಮಾಚಾರ್ಯರು ಶ್ರೀಪಾದರಾಜ ಮಠದ ಮಠಾಧೀಶರಾಗಿ ಶ್ರೀ ವಿಜ್ಞಾನನಿಧಿ ತೀರ್ಥರೆಂಬ ನಾಮಾಂಕಿತದೊಡನೆ ಸುಮಾರು ಹದಿಮೂರು ವರ್ಷ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಸಾಮಾನ್ಯ ಜನರಿಗೆ ಭೀಮಪ್ಪ ಸ್ವಾಮಿಗಳಾಗಿ ರಂಗವಿಠಲ ಪತ್ರಿಕೆಯ ಸಂಪಾದಕರಾಗಿ, ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ಸ್ಥಾಪಕರಾಗಿ, ಹಿಂದೂ-ಮುಸ್ಲಿಂ ಐಕ್ಯತೆಯ ಕೊಂಡಿಯಾಗಿ ಇಂದಿಗೂ ಚಿರಸ್ಮರಣೀಯರಾಗಿದ್ದಾರೆ. ವಿಜ್ಞಾನನಿಧಿ ತೀರ್ಥರು ಯತಿಗಳಾಗುವ ಬದಲಿಗೆ ರಾಜಕೀಯ ವ್ಯಕ್ತಿಯಾಗಿದ್ದರೆ ಮುಳಬಾಗಿಲಿನ ಇತಿಹಾಸವೇ ಬದಲಾಗುತ್ತಿತ್ತು ಎಂದು ಹಿಂದಿನ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿ ಹೇಳುತ್ತಿದ್ದರು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಸಮರ್ಥರಲ್ಲದಿದ್ದರೆ ಮೊದಲು ನೀವು ರಾಜಿನಾಮೆ ಕೊಡಿ: CJI ಸೂರ್ಯಕಾಂತ್ ರಾಜೀನಾಮೆಗೆ Congress ಒತ್ತಾಯ!

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!