ಭಟ್ಟಂಗಿಗಳು
ಮಂತ್ರಿ ಮಹೋದಯರ ಸುತ್ತ ಮುತ್ತ ಸದಾ ಸುತ್ತುವರಿಯುವ ಅತಿ ಬುದ್ಧಿಜೀವಿಗಳು
ಹಿಗ್ಗಾಮುಗ್ಗಾ ಹೊ-ಗಳಿಕೆಯೇ ಇವರ ಗಳಿಕೆಯ ಮೂಲ
ನೀನೇ ಇಂದ್ರ, ನೀನೇ ಚಂದ್ರ ಎನ್ನುತ್ತಾ ಅಧಿಕಾರದ ಕೇಂದ್ರವನ್ನು ಬಯಸುವವರು
ಭಟ್ಟರ ಅಂಗಿ ತೊಟ್ಟು ಶೆಟ್ಟರಂತೆ ಪೋಸು ಕೊಡುವವರು
ಬಿಟ್ಟ ರೀಲನ್ನೇ ಮತ್ತೆ ಮತ್ತೆ ಬಿಟ್ಟು ರೈಲು ಹತ್ತಿಸುವವರು
ಪುಂಗಿ ವಾದಕ ಗಣ
ಭಂಗಿ ತಿಂದವರಂತೆ ಆಡುವ ಕಮಂಗಿಗಳು
ಪ್ರಧಾನ ಮಂತ್ರಿಯ ಭಟ್ಟಂಗಿಯಾದರೆ ಪ್ರಶಸ್ತಿ ಸಿಗುತ್ತದೆ. ಮುಖ್ಯಮಂತ್ರಿಗಳ ಭಟ್ಟಂಗಿಯಾದರೆ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಪಟ್ಟ ಸಿಗುತ್ತದೆ
ನಮ್ಮ ನಮ್ಮ ಸ್ವಾರ್ಥ ಈಡೇರಿಸಿಕೊಳ್ಳಲು ದೇವನನ್ನು ಹೊಗಳುವ ನಾವೆಲ್ಲ ಒಂದರ್ಥದಲ್ಲಿ ಭಟ್ಟಂಗಿಗಳೇ
ತಮ್ಮ ಹೊಗಳಿಕೆಯ ಮಾಯದ ಮಾತುಗಳಿಂದ ನಮ್ಮ ಬುದ್ಧಿಯನ್ನು ಮಸುಕುಗೊಳಿಸುವ ಮಾಟಗಾರರು
ಇಷ್ಟಪಟ್ಟವರನ್ನು ಒಲಿಸಿಕೊಳ್ಳುವಾಗಲೂ ಒಮ್ಮೊಮ್ಮೆ ಈ ಕೆಲಸ ಮಾಡಬೇಕಾಗುತ್ತದೆ
ಹಿರಿಯರ ಉಪದೇಶಗಳು ಸುತ್ತ ಇರುವ ಭಟ್ಟಂಗಿಗಳ ಮಾತಿನಿಂದ ಕಿವಿಯ ತಲುಪುವುದೇ ಇಲ್ಲ
ಅಧಿಕಾರದಲ್ಲಿರುವವರು ತಮ್ಮ ಅಧಿಕಾರವನ್ನು ಪ್ರಯೋಗಿಸಿ ದೂರವಿಡಲ್ಪಡಬೇಕಾದವರು ಇವರೇ
ವಿಶ್ವನಾಥ ಸುಂಕಸಾಳ
vishwasunkasal@yahoo.com