ಹೊತ್ತು ಹೊತ್ತು ತುತ್ತು ಪಡೆಯುವುದಕ್ಕೋಸ್ಕರವೇ ಅಲ್ಲವೇ ಎಲ್ಲರ ತುತ್ತೂರಿ?
ಹೊತ್ತು ಸಾಗಿಸುವವನಿಗೆ ಹೊತ್ತಿಗೊಂದು ತುತ್ತಿಗೂ ಅಭಾವ
ಪ್ರಾಣಕ್ಕೇ ಕುತ್ತು ತರುವ ಕೆಲಸವನ್ನೂ ಕೆಲವರು ಮಾಡಲು ಸಿದ್ಧರಾಗುವುದು ಕೇವಲ ತುತ್ತಿಗಾಗಿ
ದರ ಏರಿದಷ್ಟೂ ಉದರ ಕುಗ್ಗುವುದು ತುತ್ತಿಲ್ಲದೇ
ಮೂರು ಹೊತ್ತಿನ ತುತ್ತಿರುವವರು ಉಳಿದವರನ್ನು 'ಥುತ್' ಎಂಬಂತೆ ನೋಡುವುದೇ ಹೆಚ್ಚು
ತುತ್ತು ಹೊಟ್ಟೆ ತುಂಬಿಸುತ್ತದೆ ಮುತ್ತು ತುಟಿ ಮಾತ್ರ ತುಂಬಿಸುತ್ತದೆ, ಹಾಗಾಗಿ ಮುತ್ತು ಕೊಡುವವಳಿಗಿಂತ ತುತ್ತಿಡುವವಳೇ ಮೇಲು
ರೈತ ಬಿತ್ತಿದರೆ ಮಾತ್ರ ಉಳಿದವರ ಹೊಟ್ಟೆಗೆ ತುತ್ತು. ಅನ್ಯಥಾ ಕುತ್ತು
ಕೂಳಿಗಾಗಿ ಕೂಲಿ ಯೋಜನೆಯನ್ನು ದೇವರು ಯಾವತ್ತೋ ಮಾಡಿರುವುದರಿಂದ ಕೂಲಿ ಮಾಡದಿದ್ದರೆ ಸಿಗದು ಕೂಳು
ಮೊದಲು ಆಹಾರ. ಇದಿಲ್ಲದಿದ್ದರೆ ಮಾತ್ರ ಹರೋಹರ
ಐದು ಬೆರಳಿನಲ್ಲಿ ಒಮ್ಮೆ ಎಷ್ಟು ಅಗುಳು ಬರುವುದೋ ಆ ಪ್ರಮಾಣವನ್ನು ತುತ್ತು ಎನ್ನುತ್ತಾರೆ
ಕಿತ್ತು ತಿನ್ನುವ ಬಡತನ ಕಸಿದುಕೊಳ್ಳೋದು ತುತ್ತನ್ನೇ
ಒಂದು ಕಡೆ ತುತ್ತಿಗಾಗಿ ಪರದಾಟ. ಇನ್ನೊಂದು ಕಡೆ ಹೊಟ್ಟೆ ತುಂಬಿದ ಮೇಲೂ ಹೋಳಿಗೆಯ ಆಟ
ವಿಶ್ವನಾಥ ಸುಂಕಸಾಳ
vishwasunkasal@yahoo.com