ಊರಿನ ಎಲ್ಲ ಹಾದಿಗಳನ್ನೂ ಬಲ್ಲವ
ಭವ್ಯ ಭಾರತದಲ್ಲಿ ಎಲ್ಲೆಂದರಲ್ಲಿ ಎಡತಾಕುವವ
ಶಾಸನಕರ್ತರ ಎಡವಟ್ಟಿನ ಮೂರ್ತರೂಪ
ಬಡ ದೇಶಗಳ ರಾಯಭಾರಿ
ತಂಗಳು ತಿಂದು ತಣ್ಣಗಿರುವವ
ಉಳಿದವರು ಉಳಿಸಿದ್ದು ಈತನ ಉಳಿವಿಗೆ
ಕಂಡವರ ಬಳಿಯೆಲ್ಲ ಯೋಚಿಸದೇ ಯಾಚಿಸುವ ಕೈ ಚಾಚುವ ಯಾಚಕ
ತುತ್ತು ಅನ್ನ ತುಂಡು ಬಟ್ಟೆಗಾಗಿ ಊರೂರು ಅಲೆವ ಅಲೆಮಾರಿ
ಮೂರು ಹೊತ್ತೂ ಭಕ್ಷ್ಯಕಾಗಿ ಭಿಕ್ಷೆ ಎತ್ತುವವ
ಭಕ್ಷ್ಯ ಭೋಜ್ಯಗಳೆಲ್ಲ ಈತನಿಗೆ ಭಿಕ್ಷೆ ಕೊಟ್ಟಗಲೇ
ಯಾರದೋ ಮನೆ ಹಬ್ಬ ಈತನಿಗೆ ಹೋಳಿಗೆ
ಕೆಲವರು ಭಿಕ್ಷೆ ನೀಡುವ ಬದಲು ಅನುಕಂಪ ತೋರಿಸುತ್ತಾರೆ
ಕಾಸಿಗಾಗಿ ವಿವಿಧ ಫೋಸು ಕೊಡುವವ
ಇವನಿಗೆ ಅಮ್ಮಂದಿರೆಂದರೆ ಹೆಚ್ಚು ಪ್ರೀತಿ
ಜನರ ಋಣದಲ್ಲಿ ಮುಳುಗೇಳುವವ
ವಿಶ್ವನಾಥ ಸುಂಕಸಾಳ
vishwasunkasal@yahoo.com