ಪಾರ್ಕ್
ವಿಲಾಸಿಗಳ ವಿಲಾಸದ ವಿಳಾಸ
ಅಲ್ಪ ವಿರಾಮ ಕೇಂದ್ರ
ಪ್ರೇಮಿಗಳು ಅಡ್ಡಾಡುವ ಅಡ್ಡಾ
ವ್ಯಾಯಾಮದ ಆಯಾಮಗಳೆಲ್ಲ ತೆರೆದುಕೊಳ್ಳುವ ಸ್ಥಳ
ಕೆಲವರ ಶ್ರದ್ಧಾ ಕೇಂದ್ರ
ವೃದ್ಧರೆಲ್ಲ ಪಾರ್ಕ್ ಆಗುವ ಜಾಗ
ಪದೇ ಪದೇ ಪಾರ್ಕ್ಗೆ ಹೋಗಿ ಕುಳಿತುಕೊಳ್ಳಬೇಕೆಂದು ಅನಿಸುವ ಖಾಯಿಲೆಗೆ 'ಪಾರ್ಕಿನ್ಸನ್' ಎನ್ನಬಹುದು
ನೀವಿಲ್ಲಿ ಯಾರ ಧ್ಯಾನ ಬೇಕಿದ್ದರೂ ಮಾಡಬಹುದಾದ ಉದ್ಯಾನ
ವಾಹನಗಳ ಪಾರ್ಕಿಂಗ್ಗೆ ಮಾತ್ರ ಇಲ್ಲಿ ಸ್ಥಳವಿಲ್ಲ
ವಾಹನಗಳು ಪ್ರಯಾಣ ಮುಗಿಸಿ ತೆಗೆದುಕೊಳ್ಳುವ ವಿಶ್ರಾಂತಿಗೂ ಪಾರ್ಕ್ ಮಾಡುವಿಕೆ ಎನ್ನುತ್ತಾರೆ
ಆಧುನಿಕ ಅರಳಿಕಟ್ಟೆ (ಹರಟೆ ಕೇಂದ್ರ ಅಥವಾ ಗಾಸಿಪ್ ಸೆಂಟರ್)
ನಗರದ ಪ್ರೇಮಿಗಳಿಗೆ ಮರ ಸುತ್ತುವ ಏಕೈಕ ತಾಣ
ಆಬಾಲ ವೃದ್ಧರ ವಿಹಾರ ಕೇಂದ್ರ
ನಗರದ ಸುತ್ತಲೆಲ್ಲ ಅನಾಚಾರ, ಮಧ್ಯೆ ಮಧ್ಯೆ ಬೃಂದಾವನ
ಈಗಿನ ರಾಮಂದಿರೆಲ್ಲ ಸೀತೆಯ ಜೊತೆ ತೆರಳುವ ವನ ಈ ಉಪವನ
ವಿಶ್ವನಾಥ ಸುಂಕಸಾಳ
vishwasunkasal@yahoo.com