ಭಾರತೀಯ ಜನತಾ ಪಾರ್ಟಿಯ ಸರ್ಕಾರದ ರಚನೆಯಾದ ಕೂಡಲೇ ದಲಿತರು ಹಾಗೂ ಇತರೆ ಹಿಂದುಳಿದ ಜಾತಿ ಪಂಗಡಗಳಿಗೆ ಸೇರಿದವರಿಗೆ ಸಂವಿಧಾನದತ್ತ ಮೀಸಲು ಸೌಲಭ್ಯದ ಮುಂದುವರಿಕೆಯ ಪ್ರಸ್ತಾಪವಾಗುವುದು ಸಹಜವಾದ ಒಂದು ಕ್ರಿಯೆ ಎನ್ನುವಂತಾಗಿದೆ.
ಇದುವರೆಗೆ ಭಾರತೀಯ ಜನತಾ ಪಾರ್ಟಿ ಪ್ರತ್ಯಕ್ಷವಾಗಿ ಮೀಸಲು ನಿಯಮಗಳನ್ನು ವಿರೋಧಿಸಿಲ್ಲ. ಹತ್ತು ವರ್ಷಕ್ಕೊಮ್ಮೆ ಪರಿಶೀಲನೆಗೆ ಒಳಪಡಬೇಕಾದ ಈ ನಿಯಮ ಕುರಿತ ಸಂಸದೀಯ ಚರ್ಚೆಗಳಲ್ಲಿ ಎಂದೂ ಬಿಜೆಪಿ ತನ್ನ ವಿರೋಧವನ್ನು ಪ್ರಕಟಿಸಿಲ್ಲ.
ಆದರೆ, ಪಕ್ಷದ ಬೇರೆ ಬೇರೆ ಅಂಗ ಸಂಸ್ಥೆಗಳು, ಘಟಕಗಳು ಹಾಗೂ ಹಲವು ವ್ಯಕ್ತಿಗಳು ಮೀಸಲು ನಿಯಮಗಳನ್ನು ಈಗ ಪಾಲಿಸುತ್ತಿರುವಂತೆಯೇ ಪಾಲಿಸಿದರೆ ದಲಿತರ ಉದ್ಧಾರ ನಿಜವಾದ ಅರ್ಥದಲ್ಲಿ ಈ ಶತಮಾನದ ಕೊನೆಯಲ್ಲಿ ಈಗಿನಂತೆಯೇ ಉಳಿದಿರುತ್ತದೆ ಎನ್ನುವ ಅರ್ಥ ಬರುವ ಮಾತುಗಳನ್ನು ಆಡಿರುವುದುಂಟು. ವಾಜಪೇಯಿ ನೇತೃತ್ವದ ಸರ್ಕಾರ ಸಂವಿಧಾನದ ಕಾರ್ಯಾಚರಣೆಯ ಪರಿಣಾಮದ ಪರಾಮರ್ಶೆಗೆ ಸುಪ್ರೀಮ್ ಕೋರ್ಟಿನ ನಿವೃತ್ತ ಶ್ರೇಷ್ಠ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದಾಗ ಒಂದು ದೊಡ್ಡ ಬೊಬ್ಬೆ ಎದ್ದಿತ್ತು.
ಬಿಜೆಪಿ ಸರ್ಕಾರ ದಲಿತರ ಮೀಸಲು ಸೌಲಭ್ಯಕ್ಕೆ ಕಲ್ಲು ಹಾಕಲು ಸಿದ್ಧತೆ ನಡೆಸಿದೆ ಎನ್ನುವ ಹುಯಿಲು ಕೇಳಿ ಬಂದಿತ್ತು. ವೆಂಕಟಾಚಲಯ್ಯ ಸಮಿತಿಗೆ ಆ ವಿಷಯವನ್ನು ವಹಿಸಿರಲಿಲ್ಲ. ಸಮಿತಿಯ ವರದಿಯಲ್ಲಿ ಮೀಸಲು ನಿಯಮ ಕುರಿತ ಹೆಚ್ಚಿನ ಪ್ರಸ್ತಾಪವಾಗಿಲ್ಲ. ಈಚೆಗೆ ಹಲವಾರು ಜನವರ್ಗಗಳ ಪ್ರಾತಿನಿಧಿಕ ಸಂಘಟನೆಗಳ ಪರವಾಗಿ, ಅರವತ್ತೆರಡು ವರ್ಷಗಳ ಕಾಲ ಮೀಸಲು ನಿಯಮ ಜಾರಿಯಲ್ಲಿದ್ದರೂ, ಅದರ ಪರಿಣಾಮ ಶೋಷಿತ ಜನಾಂಗಗಳ ಸ್ಥಿತಿಗತಿಯನ್ನು ಉತ್ತಮಪಡಿಸಿದೆ ಎಂದು ಹೇಳುವ ಸ್ಥಿತಿ ಇಲ್ಲವಲ್ಲ ಎಂದು ಅನೇಕರು ಕೊರಗುತ್ತಿರುವುದೂ ನಿಜ.
ಈಗ ಮತ್ತೆ ಮೀಸಲು ನಿಯಮಗಳ ಪರಿಣಾಮ ಕುರಿತ ಚರ್ಚೆ ಅನೇಕ ವಲಯಗಳಲ್ಲಿ ನಡೆದಿದೆ. ಕೆಲವು ದಲಿತ ಸಂಘಟನೆಗಳೂ ಈ ವಿಚಾರದಲ್ಲಿ ಆಸಕ್ತಿಯನ್ನು ವಹಿಸಿರುವುದು ಸ್ವಾಗತಾರ್ಹವಾದ ವಿಚಾರ.
ಶನಿವಾರ ಬೆಂಗಳೂರಿನಲ್ಲಿ ಬಿಜೆಪಿ ದಲಿತ ವಿಭಾಗದ ನಾಯಕ ಸಂಜಯ ಪಾಸ್ವಾನ್ ಅವರು ಮೀಸಲು ಸೌಲಭ್ಯ, ಯಾವುದೇ ಕುಟುಂಬಕ್ಕಾದರೂ ಆಗಲಿ, ಮೂರು ತಲೆ ಮಾರುಗಳಿಗಿಂತ ಹೆಚ್ಚು ಅವಧಿಗೆ ಸಲ್ಲಬಾರದು ಎಂದು ಹೇಳಿರುವುದು ಮತ್ತೆ ವಾದ-ವಿವಾದದ ಕೇಂದ್ರವಾಗಬಹುದು.
ಸಂಜಯ ಪಾಸ್ವಾನ್ ಅವರ ಪ್ರಕಾರ ಈಗಿನ ಪದ್ಧತಿಯಲ್ಲಿ ದಲಿತರ - ಮೀಸಲು ಸೌಲಭ್ಯದ ದೊಡ್ಡ ಪಾಲು ಈಗಾಗಲೇ ಸಾಕಷ್ಟು ಮುಂದುವರಿದಿರುವ ಹಾಗೂ ಶ್ರೀಮಂತವಾಗಿರುವ ಕುಟುಂಬಗಳಿಗೇ ಲಭ್ಯವಾಗುತ್ತಿದೆ. ಅದು ಸಹಜ ಕೂಡ. ಅಂದರೆ, ಈ ವರ್ಗದ ಕುಟುಂಬಗಳನ್ನು ಮೀಸಲು ನಿಯಮದಲ್ಲೇ ಮುಂದುವರಿಸಿದರೆ, ನಿಜವಾಗಲೂ ವಿಶೇಷ ಸೌಲಭ್ಯ ಬೇಕಾಗಿರುವ ಬಡ ದಲಿತ ಕುಟುಂಬಗಳ ಮಕ್ಕಳಿಗೆ ಅವಕಾಶವಾಗುತ್ತದೆ ಎನ್ನುವ ವಾದವನ್ನು ನಿರಾಕರಿಸುವುದು ಕಷ್ಟ.
ಶ್ರೀಮಂತ ದಲಿತರಿಗೆ ಅಲಭ್ಯವಾದ ಸ್ಥಾನಗಳು ದಲಿತ ಸಮುದಾಯಗಳ ಹೊರಗೆ ಹೋಗುವುದು ಸಾಧ್ಯವಿಲ್ಲ. ದಲಿತರ ಕೋಲಾರ ಪ್ರಮಾಣ ಹಾಗೇ ಉಳಿದಿರುತ್ತದೆ. ಅಂದರೆ "ಇತರರು" ದಲಿತರಿಗೆ ಲಭ್ಯವಾಗಬೇಕಾದ ಸ್ಥಾನಗಳನ್ನು ಗಳಿಸುವ ಹುನ್ನಾರ ಇದು ಎಂದು ಯಾರೂ ಆರೋಪಿಸುವಂತಿಲ್ಲ. ಇಲ್ಲಿ ವ್ಯತ್ಯಾಸವಾಗುವುದು ಶ್ರೀಮಂತ - ಕಲಿತ - ಮುಂದುವರಿದ ದಲಿತ ಸಮಾಜಕ್ಕೆ ದಕ್ಕಬಹುದಾಗಿದ್ದ ಸ್ಥಾನಗಳು ಬಡ ದಲಿತ ಸಮುದಾಯಗಳ ಪಾಲಾಗುವುದಷ್ಟೇ. ಇದರಿಂದ ಸಾಮಾಜಿಕ ನ್ಯಾಯ ವಿತರಣೆಯ ಆಂದೋಲನದಲ್ಲಿ ಒಂದು ಹೊಸದಾದ ತರ್ಕಬದ್ಧ ಕೆಟ್ಟ ಹೆಜ್ಜೆಯನ್ನು ಇಟ್ಟಂತಾಗುತ್ತದೆ.
ಇಂತಹ ನೀತಿಯಿಂದ ಬಡ-ದಲಿತ ಸಮುದಾಯಗಳಿಗೆ ಸಮಾಜದಲ್ಲಿ ಉನ್ನತಮಟ್ಟದ ಸ್ಥಾನಗಳನ್ನು ಪಡೆಯಲು ಹೆಚ್ಚು ಹೆಚ್ಚು ಅವಕಾಶ ಸಿಗುವಂತೆ ಆಗುತ್ತದೆ. ಆದರೂ ಈ ರೀತಿಯ ಬದಲಾವಣೆಗೆ ಶೋಷಿತ ಬಡ ದಲಿತ ಸಮುದಾಯಗಳ ಸಂವಿಧಾನದತ್ತ ಹಕ್ಕನ್ನು ಪ್ರತಿಪಾದಿಸುವ ನೆಪದಲ್ಲಿ ಪ್ರತಿಭಟನೆಯ ಆಂದೋಲನ ನಡೆಯುವ ಸಂಭವವೂ ಇದ್ದೇ ಇದೆ.
ಆ ಆಂದೋಲನದ ನಾಯಕತ್ವವನ್ನು ಪ್ರಬಲ ದಲಿತ ವರ್ಗದ ನಾಯಕರೇ ವಹಿಸುವ ಸಂಭವವೇ ಹೆಚ್ಚು. ಈ ಬದಲಾವಣೆಯಿಂದ ಪ್ರತಿಕೂಲ ಪರಿಣಾಮವಾಗುವುದು ಆ ಸಮಾಜದ ಮೇಲೇ. ಅದು ಸಂಕುಚಿತ ವಲಯವೂ ಹೌದು.
ಈಗಾಗಲೇ ರಾಜಕೀಯ ಪಕ್ಷಗಳಲ್ಲಿನ ದಲಿತ ನಾಯಕತ್ವದ ಪ್ರತಿನಿಧಿಗಳೇನಕರು ಶ್ರೀಮಂತ ಕಲಿತ ಮುಂದುವರಿದ ದಲಿತರೇ. ಕೇಂದ್ರದಲ್ಲಿ, ರಾಜ್ಯಗಳಲ್ಲಿ ದಲಿತ ಮಂತ್ರಿಗಳಲ್ಲಿ ದೊಡ್ಡ ಪಾಲಿರುವುದು ವಂಶಪಾರಂಪರ್ಯದ ದಲಿತ ನಾಯಕ ಕುಟುಂಬಗಳದ್ದೇ.
ಸರ್ಕಾರಿ ನೌಕರಿಯ ಅತ್ಯುನ್ನತ ಸ್ಥಾನಗಳಲ್ಲಿ ದಲಿತರ ಪ್ರತಿನಿಧಿಗಳಾಗಿ (ಮೀಸಲು ಸೌಲಭ್ಯದ ಫಲಾನುಭವಿಗಳು) ಇರುವವರು ಮುಂದುವರಿದ ದಲಿತ ಸಮುದಾಯಕ್ಕೆ ಸೇರಿದವರೇ. ನಿಜ. ಇಂತಹ ಹೇಳಿಕೆಗಳನ್ನು ಸಮರ್ಥಸುವಂತಹ ಯಾವ ಅಧ್ಯಯನವೂ ನಡೆದಿಲ್ಲ. ಆದರೆ ಮಂತ್ರಿಗಳು, ಉನ್ನತ ಅಧಿಕಾರದ ಸ್ಥಾನದಲ್ಲಿರುವ ದಲಿತರ ಹಿನ್ನೆಲೆಯನ್ನು ಸಾಮಾನ್ಯ ಜ್ಞಾನದ ಆಧಾರದ ಮೇಲೆ ಗಮನಿಸಿದರೆ, ಮೇಲ್ನೋಟಕ್ಕೆ ಕಾಣುವುದು ಹಾಗೇ.
ಈ ವಿಚಾರದಲ್ಲಿ ಅರ್ಥಪೂರ್ಣವಾದ ಪ್ರಾಮಾಣಿಕ ಅಧ್ಯಯನ ನಡೆಯಬೇಕಾಗಿದೆ.