ಸಂಪಾದಕೀಯ

ಮಹಾರಾಜರಷ್ಟೇ ಹಣ ನೀಡಿದ ಯುವಕ

ಪಂಡಿತ್ ಮದನಮೋಹನ ಮಾಳವೀಯರು ಶಿಕ್ಷಣತಜ್ಞರಾಗಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಸಿದ್ಧರು. ಬನಾರಸ್ ಹಿಂದು ವಿಶ್ವವಿದ್ಯಾನಿಲಯದ ಸ್ಥಾಪಕರು. ಅಲ್ಲದೆ ಭಾರತದಲ್ಲಿ ಸ್ಕೌಟ್ ಚಳವಳಿಯ ನೇತಾರರಾಗಿ ಸಹ ಹೆಸರುವಾಸಿ. ಒಮ್ಮೆ ಬನಾರಸ್ ವಿಶ್ವವಿದ್ಯಾಲಯಕ್ಕಾಗಿ ಧನಸಂಗ್ರಹಣೆಗಾಗಿ ಒಂದು ಬೃಹತ್ ಸಭೆಯನ್ನು ಕರೆದಿದ್ದರು. ಅದರಲ್ಲಿ ರಾಜ ಮಹಾರಾಜರು, ಭಾರಿ ಶ್ರೀಮಂತರು ಮತ್ತು ಕೆಲವು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಆ ಸಭೆಯಲ್ಲಿ ಮಾಳವೀಯರು ಪರಿಣಾಮಕಾರಿಯಾಗಿ ಮಾತನಾಡಿ, ವಿಶ್ವವಿದ್ಯಾನಿಲಯದ ಸ್ಥಾಪನೆಯ ಅವಶ್ಯಕತೆಯನ್ನು ಒತ್ತಿ ಹೇಳಿದರು ಮತ್ತು ಅದಕ್ಕಾಗಿ ಉದಾರ ದೇಣಿಗೆಯನ್ನೂ ಬಯಸಿದರು. ಹಣ ನೀಡಿದವರ ಅಥವಾ ವಾಗ್ದಾನ ಮಾಡುವವರ ಹೆಸರು ಮತ್ತು ಮೊತ್ತವನ್ನು ಆ ಸಭೆಯಲ್ಲೇ ಪ್ರಕಟಿಸುವುದಾಗಿ ಘೋಷಿಸಿದರು. ಅಲ್ಲಿಗೆ ಆಗಮಿಸಿದ್ದ ರಾಜಮಹಾರಾಜರು ಮತ್ತು ಇತರ ಗಣ್ಯರು ತಾವು ನೀಡಲು ಬಯಸುವ ಮೊತ್ತವನ್ನು ತಿಳಿಸುತ್ತಿದ್ದಂತೆ ಮಾಳವೀಯರವರು ಅವರ ಹೆಸರು ಮತ್ತು ಮೊತ್ತವನ್ನು ಸಭೆಯಲ್ಲಿ ಪ್ರಕಟಿಸುತ್ತಿದ್ದರು. ಅಲ್ಲಿ ಅತ್ಯಂತ ಹೆಚ್ಚು ಹಣವನ್ನು ವಾಗ್ದಾನ ಮಾಡಿದವರು ಗ್ವಾಲಿಯರ್‌ನ ಮಹಾರಾಜ ಗಾಯಕ್‌ವಾಡ್‌ರವರು. ಅವರು ಮೂರು ಲಕ್ಷ ರುಪಾಯಿ ಕೊಡುವುದಾಗಿ ಹೇಳಿದರು. ಆ ಸಭೆಯಲ್ಲಿ ಕಲ್ಕತ್ತದ ಒಬ್ಬ ಯುವ ಕೈಗಾರಿಕೋದ್ಯಮಿಯೊಬ್ಬ ಭಾಗವಹಿಸಿದ್ದ. ಆತ ಸುಮಾರು ಇಪ್ಪತ್ತೊಂದು-ಇಪ್ಪತ್ತೆರಡರ ಯುವಕ. ಮಾಳವೀಯರವರಿಗೆ ಅವನ ಬಗ್ಗೆ ಬಹಳ ಪ್ರೀತಿ. ಕೊನೆಗೆ ಅವನ ಸರದಿ ಬಂತು. ಅವನು ಒಂದು ಲಕ್ಷ ರುಪಾಯಿ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ತಾನು ನೀಡಲಿರುವ ಹಣದ ಮೊತ್ತವನ್ನು ಮಾಳವೀಯರವರಿಗೆ ತಿಳಿಸಿದಾಗ ಅವರಿಗೆ ಅಚ್ಚರಿ ಕಾದಿತ್ತು. ಮಾಳವೀಯರವರು ಧ್ವನಿವರ್ಧಕದ ಮುಂದೆ ಬಂದು ಆ ಯುವಕನ ಹೆಸರನ್ನು ಹೇಳಿ, ಮೂರು ಲಕ್ಷ ರುಪಾಯಿಗಳನ್ನು ವಾಗ್ದಾನ ಮಾಡಿದ್ದಾರೆ ಎಂದು ಪ್ರಕಟಿಸಿದರು. ತಕ್ಷಣ ನೆರೆದಿದವರೆಲ್ಲ ಆಶ್ಚರ್ಯಚಕಿತರಾದರು. ನಮ್ಮೊಡನೆ ಸ್ಪರ್ಧಿಸಲು ನಿಂತಿರುವ ಈ ವ್ಯಕ್ತಿ ಯಾರು? ಮೂರು ಲಕ್ಷ ರುಪಾಯಿ ನೀಡುವ ಮಹಾನುಭಾವ ಯಾರಿವನು? ಎಂದು ಎಲ್ಲರ ದೃಷ್ಟಿ ಆತನ ಕಡೆ ಹೊರಳಿತು. ಹೀಗೆ ಎಲ್ಲರ ಹುಬ್ಬೇರುವಂತೆ ಮಾಡಿದ ಆ ಯುವಕನೇ ಜಿ. ಡಿ. ಬಿರ್ಲಾ ಎಂದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಲಯದಲ್ಲಿ ಪ್ರಸಿದ್ಧನಾದ ಘನಶ್ಯಾಂದಾಸ್ ಬಿರ್ಲಾ. ಭಾರತದಲ್ಲಿ ಹಲವು ಕೈಗಾರಿಕೆಗಳ ಸ್ಥಾಪಕ.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT