ಸಂಪಾದಕೀಯ

ಅದೊಂದು ದೈವಲೀಲೆ ಎಂದ ದೇವುಡು

Srinivasamurthy VN

ದೇವುಡು ನರಸಿಂಹಶಾಸ್ತ್ರಿಗಳು ನಾಡು ಕಂಡ ಒಬ್ಬ ಶ್ರೇಷ್ಠ ಸಾಹಿತಿ ಮತ್ತು ವಿದ್ವಾಂಸರು. ಕನ್ನಡಿಗರಿಗೆ ದೇವುಡು ಎಂದೇ ಪ್ರಸಿದ್ಧರು. ಅವರ ಮಹಾಬ್ರಾಹ್ಮಣ ಮತ್ತು ಮಹಾಕ್ಷತ್ರಿಯ ಕಾದಂಬರಿಗಳು ಕನ್ನಡ ಸಾಹಿತ್ಯಕ್ಕೆ ದೊರೆತ ಅಮೋಘ ಕೊಡುಗೆಗಳು. ಅದೇ ರೀತಿ ಅವರ ಮೀಮಾಂಸ ದರ್ಶನ, ಮಹಾದರ್ಶನ, ಮಯೂರ, ಮುಂತಾದ ಕೃತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಅವರ ಮಯೂರ ಕಾದಂಬರಿಯಂತೂ ಚಲನ ಚಿತ್ರವಾಗಿ ಅಪಾರ ಜನಪ್ರಿಯತೆ ಗಳಿಸಿ, ಎಲ್ಲರ ಮನ ಸೂರೆಗೊಂಡಿತು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ ದೇವುಡು ಸದಾ ಬಡತನದ ಜೀವನವನ್ನು ನಡೆಸಿದರೂ ಪರೋಪಕಾರವನ್ನು ಮಾತ್ರ ಬಿಟ್ಟಿರಲಿಲ್ಲ. ಒಮ್ಮೆ ದೇವುಡು ನರಸಿಂಹಶಾಸ್ತ್ರಿಗಳಿಗೆ ಹಣದ ಅವಶ್ಯಕತೆಯುಂಟಾಯಿತು. ಅದಕ್ಕಾಗಿ ಬೆಂಗಳೂರಿನ ಪ್ರೆಸ್ ಕ್ಲಬ್ಬಿಗೆ ಬಂದು ಯಾರೋ ಒಬ್ಬ ಪತ್ರಕರ್ತನನ್ನು ಕಾಡಿಬೇಡಿ ಮೂವತ್ತು ರುಪಾಯಿಗಳನ್ನು ಸಾಲವಾಗಿ ಪಡೆದರು. ಮನೆಗೆ ವಾಪಸ್ಸು ಬರುವಾಗ ದಾರಿಯಲ್ಲಿ ಒಬ್ಬ ಹೆಂಗಸು ಮಗುವನ್ನೆತ್ತಿಕೊಂಡು ಅಳುತ್ತಾ ಕುಳಿತಿದ್ದಳು. ದೇವುಡು ಅವರಿಗೆ ಆ ಮಹಿಳೆಯ ಪರಿಸ್ಥಿತಿ ನೋಡಿ ಮನಕರಗಿತು. ಏನೋ ತೊಂದರೆಯಲ್ಲಿರಬೇಕೆಂದು ಭಾವಿಸಿ, ಆ ಮಹಿಳೆಗೆ ಏಕೆ ಅಳುತ್ತಿದ್ದೀಯ ಎಂದು ಪ್ರಶ್ನಿಸಿದರು. ಆಗ ಆಕೆ, ತನ್ನ ತಾಯಿ ಊರಿನಲ್ಲಿ ತೀರಿಕೊಂಡಿರುವುದಾಗಿಯೂ, ಹೋಗಿಬರಲು ಕಾಸಿಲ್ಲದಿರುವುದರಿಂದ ಅಳುತ್ತಿರುವುದಾಗಿ ತಿಳಿಸಿದಳು. ಆಗ ದೇವುಡು ತಮ್ಮ ಅವಶ್ಯಕತೆಗಾಗಿ ಸಾಲವಾಗಿ ತಂದಿದ್ದ ಮೂವತ್ತು ರುಪಾಯಿಯನ್ನು ಆಕೆಗೆ ನೀಡಿ ಹೊರಟುಹೋದರು.  ಅದನ್ನು ತಮ್ಮ ಮಿತ್ರ ತ.ರಾ.ಸುಬ್ಬರಾಯರ ಬಳಿ ಹೇಳಿಕೊಂಡು, ಅದೊಂದು ದೈವಲೀಲೆಯಾಗಿದ್ದು, ಯಾರದೋ ಅಗತ್ಯ ಪೂರೈಸಲು ಇನ್ಯಾರಿಗೋ ಅಗತ್ಯವನ್ನು ಸೃಷ್ಟಿಸುವ ದೇವರ ಲೀಲೆಗೆ ಅಚ್ಚರಿ ವ್ಯಕ್ತಪಡಿಸಿದ್ದರು. ತಮಗೆಷ್ಟೇ ಕಷ್ಟವಿದ್ದರೂ ಮತ್ತೊಬ್ಬರಿಗೆ ಸಹಾಯ ಮಾಡುತ್ತಿದ್ದ ದೇವುಡು ಅವರ ಆದರ್ಶ ನಮಗೆಲ್ಲಾ ದಾರಿದೀಪ.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


SCROLL FOR NEXT