ಅರುಣಿಮಾ ಸಿನ್ಹಾ ಪರ್ವತಾರೋಹಣದಲ್ಲೀಗ ಹೆಚ್ಚು ಚರ್ಚೆಯಾಗುತ್ತಿರುವ ಹೆಸರು. ಏಕೆಂದರೆ ಒಂದು ಕಾಲಿಲ್ಲದಿದ್ದರೂ ಮೌಂಟ್ ಎವರೆಸ್ಟ್ ಶಿಖರವನ್ನೇರಿ ಸಾಹಸ ಮೆರೆದ ಯುವತಿ ಈಕೆ. 2011ರಲ್ಲಿ ದೆಹಲಿಯಲ್ಲಿ ನಡೆಯುತ್ತಿದ್ದ ಸ್ಫರ್ಧಾ ಪರೀಕ್ಷೆಯೊಂದರಲ್ಲಿ ಭಾಗವಹಿಸಲು ಲಕ್ನೋದಿಂದ ದೆಹಲಿಗೆ ಪದ್ಮಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಪಯಣಿಸುತ್ತಿದ್ದಳು. ದರೋಡೆಕೋರರ ಗುಂಪೊಂದು ಅವಳನ್ನು ದೋಚಲು ಪ್ರಯತ್ನಿಸಿದಾಗ ಅವಳು ತೋರಿದ ಪ್ರತಿರೋಧಕ್ಕಾಗಿ ಕೋಪಗೊಂಡು ಅವಳನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿಬಿಟ್ಟರು. ಮೇಲೇಳಲು ಪ್ರಯತ್ನಿಸುತ್ತಿರುವಾಗಲೇ ಎದುರಿನಿಂದ ಬಂದ ಇನ್ನೊಂದು ರೈಲು ಅವಳ ಕಾಲಿನ ಮೇಲೆ ಹಾದು ಹೋಗಿದ್ದರಿಂದ ಒಂದು ಕಾಲನ್ನೇ ಕಳೆದುಕೊಳ್ಳಬೇಕಾಯಿತು. ಅದಕ್ಕೂ ಪೂರ್ವದಲ್ಲಿ ಅವಳು ವಾಲಿಬಾಲ್ ಮತ್ತು ಫುಟ್ಬಾಲ್ ಆಟಗಾರ್ತಿಯಾಗಿದ್ದುದರಿಂದ ತನಗಾದ ನೋವನ್ನು ಕ್ರೀಡಾ ಮನೋಭಾವದಲ್ಲಿಯೇ ತೆಗೆದುಕೊಂಡಳು. ಕಾಲಿಲ್ಲದಿದ್ದರೂ, ಏನಾದರೂ ಸಾಧನೆ ಮಾಡುವ ತವಕ ಮನಸ್ಸಿನಲ್ಲಿ ಉದಯವಾಯಿತು. ಆಗ ಅವಳಿಗೆ ಕಾಣಿಸಿದ್ದು ಮೌಂಟ್ ಎವರೆಸ್ಟ್ ಶಿಖರ. ಅದನ್ನು ಯಾವ ವಿಕಲಾಂಗ ಮಹಿಳೆಯೂ ಅಲ್ಲಿಯವರೆಗೆ ಏರಿರಲಿಲ್ಲ. ಹೀಗಾಗಿ ಈ ಹಿಂದೆ ಮೌಂಟ್ ಎವರೆಸ್ಟ್ ಹತ್ತಿದ್ದ ಬಚೇಂದ್ರಿಪಾಲರನ್ನು ಸಂಪರ್ಕಿಸಿ ಅವರಿಂದ ತರಬೇತಿ ಪಡೆದಳು. ಅಲ್ಲದೆ, ಉತ್ತರಕಾಶಿಯಲ್ಲಿನ ತರಬೇತಿ ಶಾಲೆಯಲ್ಲಿಯೂ ಸೂಕ್ತ ಸಿದ್ಧತೆ ನಡೆಸಿದಳು. ಹೀಗಾಗಿ 2013, ಮೇ 21ರಂದು ಮೌಂಟ್ ಎವರೆಸ್ಟ್ ಶಿಖರ ಹತ್ತಿದಾಗ ಅವಳಿಗಾದ ಸಂತೋಷ ಅಷ್ಟಿಷ್ಟಲ್ಲ. ಅದಕ್ಕಾಗಿ ಅವಳು ತೆಗೆದುಕೊಂಡ ಅವಧಿ 52 ದಿನಗಳು. ವಿಶ್ವದ ಪ್ರಥಮ ಒಂಟಿಕಾಲಿನ ಮಹಿಳಾ ಪರ್ವತಾರೋಹಿಯ ಅಪ್ರತಿಮ ಸಾಧನೆ ಅದಾಗಿತ್ತು. ಅವಳ ಸಾಧನೆಯನ್ನು ಮೆಚ್ಚಿ ಉತ್ತರಪ್ರದೇಶ ಸರ್ಕಾರವು 20 ಲಕ್ಷ ಹಣ ನೀಡಿ ಸನ್ಮಾನ ಮಾಡಿತು. ಸಮಾಜವಾದಿ ಪಕ್ಷ 5 ಲಕ್ಷ ರು. ನೀಡಿ ಗೌರವಿಸಿತು. ರೈಲ್ವೆ ಇಲಾಖೆ ಕೂಡ 5 ಲಕ್ಷ ರು.ಗಳನ್ನು ನೀಡಿತು. ಇದೀಗ ತನಗೆ ದೊರೆತ ಎಲ್ಲ ಪ್ರಶಸ್ತಿಯ ಮತ್ತು ಪರಿಹಾರದ ಹಣವನ್ನು ಪಂಡಿತ್ ಚಂದ್ರಶೇಖರ್ ವಿಕಲಾಂಗ ಅಕಾಡೆಮಿ ಸ್ಥಾಪನೆಗೆ ಉಪಯೋಗಿಸಿದ್ದು, ವಿಕಲಾಂಗ ಮತ್ತು ಬಡ ವ್ಯಕ್ತಿಗಳ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿದ್ದಾಳೆ. ನಿನ್ನ ಈ ಸಾಧನೆಗೆ ಸ್ಫೂರ್ತಿ ಯಾರು ಎಂಬ ಪ್ರಶ್ನೆಗೆ ಅವಳು ನೀಡುವ ಉತ್ತರ ನಿಜಕ್ಕೂ ಉಲ್ಲೇಖನೀಯ- "ಕ್ರಿಕೆಟ್ ಪಟು ಯುವರಾಜ ಸಿಂಗ್ ಕ್ಯಾನ್ಸರನ್ನು ಗೆದ್ದು ಮತ್ತೆ ಕ್ರಿಕೆಟ್ ಆಡಲು ಮುಂದಾಗಿರುವುದೇ ನನಗೆ ಸ್ಫೂರ್ತಿಯಾಯಿತು. ಅವರಂತೆ ತಾನೂ ಏನಾದರೂ ಸಾಧನೆ ಮಾಡಬೇಕೆಂದು ನಿರ್ಧರಿಸಿ, ಮೌಂಟ್ ಎವರೆಸ್ಟ್ ಪರ್ವತ ಏರಿದೆ. ವಿಶ್ವ ದಾಖಲೆ ಮಾಡಿರುವುದು ನಿಜಕ್ಕೂ ಸಂತಸ ತಂದಿದೆ" ಎನ್ನುತ್ತಾಳೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com