ದಾಕ್ಷಿಣಾತ್ಯರ ಮುಖ್ಯಗುಣ
ದಕ್ಷಿಣೆ ತೆಗೆದುಕೊಳ್ಳುವಾಗ ತೋರಬಾರದ ಭಾವ
ಚೂರು ಬೇಕಿತ್ತು ಎನಿಸುವಾಗಲೇ ಸಾಕಪ್ಪಾ ಎನ್ನುವುದು
ಮನಸ್ಸು ಬೇಕು ಎನ್ನುತ್ತಿದ್ದರೂ ಬಾಯಲ್ಲಿ ಮಾತ್ರ ಸಾಕು
ನೆಂಟರ ಮನೆಗೆ ನಾವು ಹೋದಾಗ ನಮ್ಮಿಂದ ಅವರು ಬಯಸುವ ಗುಣ
ನೆಂಟರು ನಮ್ಮ ಮನೆಗೆ ಬಂದಾಗ ಅವರು ನಮ್ಮಲ್ಲಿ ತೋರದ ಗುಣ
ದಾಕ್ಷಿಣ್ಯ ಹೊಟ್ಟೆ ತುಂಬಿಸುವುದಿಲ್ಲ. ನಿರ್ದಾಕ್ಷಿಣ್ಯ ಮನಸ್ಸು ತುಂಬಿಸುವುದಿಲ್ಲ
ದಾಕ್ಷಿಣ್ಯ ಸಂಪೂರ್ಣ ಬಿಟ್ಟರೆ ದಾಕ್ಷಾಯಣಿಯಂತೆ ನಾಶವಾಗಬೇಕಾಗುತ್ತದೆ
ನಮ್ಮ ದಕ್ಷತೆಯನ್ನು ಸಾಬೀತು ಮಾಡುವಾಗ ಇದು ಇರಬಾರದು
ಪ್ರೇಯಸಿಯ ಬಳಿ ತೋರಬಹುದಾದ ಮತ್ತು ಹೆಂಡತಿಯ ಬಳಿ ಇಟ್ಟುಕೊಳ್ಳಬಾರದ ಗುಣ
ಸ್ವಜನರಲ್ಲಿ ದಾಕ್ಷಿಣ್ಯವಿರಬೇಕಂತೆ. ಹಾಗಂತ ಪರಜನರಲ್ಲಿ ನಿರ್ದಾಕ್ಷಿಣ್ಯವೂ ಸರಿಯಲ್ಲ
ಮನೆಯಲ್ಲಿ ಆರು ತಿನ್ನುವವ ನೆಂಟರ ಮನೆಯಲ್ಲಿ ಮೂರಕ್ಕೇ ಸಾಕೆನ್ನುವಿಕೆ
ಉಪಚಾರ ಮಾಡಿಸಿಕೊಳ್ಳುವಾಗ ಉಪಚಾರಕ್ಕೆ ಬೇಡ ಎನ್ನುವಿಕೆ
ತುಂಬ ದಾಕ್ಷಿಣ್ಯ ಮಾಡಿಕೊಂಡರೆ ನಮ್ಮ ಹೊಟ್ಟೆಯೂ ತುಂಬುವುದಿಲ್ಲ, ಕಿಸೆಯೂ ತುಂಬದು
-ವಿಶ್ವನಾಥ ಸುಂಕಸಾಳ
vishwasunkasal@yahoo.com