ಬ್ರೆಜಿಲ್ನಲ್ಲಿ ಪುಟ್ಬಾಲ್ ಭಾವನಾತ್ಮಕವಾಗಿ ರಾಷ್ಟ್ರೀಯ ಹೆಮ್ಮೆಯ ಕ್ರೀಡೆ. ಅಲ್ಲಿನ ಜನಸಾಮಾನ್ಯ ವರ್ಗಗಳಿಗೆ ಫುಟ್ಬಾಲ್ ಬಿಟ್ಟರೆ ಬೇರೆ ಏನೂ ಇಲ್ಲದಿದ್ದರೂ ನಡೆದೀತು. ಅಂತಹ ನಾಡಿನಲ್ಲಿ 64 ವರ್ಷಗಳ ಅನಂತರ ವಿಶ್ವಕಪ್ ಫುಟ್ಬಾಲ್ ಟೂರ್ನಿ ನಡೆದಾಗ, ದೇಶಕ್ಕೇ ದೇಶವೇ ಭಾವಿಸಿದ್ದು, ಈ ಬಾರಿ ಜಾಗತಿಕ ಪುಟ್ಬಾಲ್ ಕಿರೀಟ ತನ್ನದೇ ಎಂದೇ.
ಆದರೆ ಆ ನಿರೀಕ್ಷೆ ಸೆಮಿಫೈನಲ್ ಹಂತದಲ್ಲೇ ಮಂಗಳವಾರ ಕುಸಿದು ಬಿದ್ದಿದ್ದು, ಅಕ್ಷರಶಃ ದೇಶಕ್ಕೆ ದೇಶವನ್ನೇ ಕಣ್ಣೀರಿನ ಹೊಳೆಯಲ್ಲಿ ಮುಳುಗಿಸಿದಂತಾಗಿದೆ. ಅದರಲ್ಲೂ ಜರ್ಮನಿಯ ತಂಡ, ಬ್ರೆಜಿಲ್ ತಂಡವನ್ನು 7-1 ಗೋಲುಗಳ ಅಂತರದಿಂದ ಸೋಲಿಸಿ ಇತಿಹಾಸದಲ್ಲೇ ಆ ದೇಶ ಕಂಡು ಕೇಳದ ರೀತಿಯ ಅತಿ ಹೀನಾಯ ರೀತಿಯ ಸೋಲನ್ನು ಹೇರಿದ್ದು, ಅಟ್ಟಹಾಸದಿಂದ ಮೆರೆದಿದ್ದು ಸಾಮಾನ್ಯವಾದ ಘಟನೆ ಅಲ್ಲ.
ನಿಜ, ಬ್ರೆಜಿಲ್ನ ಅಗ್ರಗಣ್ಯ ಆಟಗಾರ ನೆಮಾರ್ ಗಾಯಗೊಂಡು ಮೈದಾನಕ್ಕೆ ಇಳಿಯಲಿಲ್ಲ. ಆದರೂ ಉಳಿದ ಆಟಗಾರರೇನೂ ಕಳಪೆಯ ಗುಣಮಟ್ಟದವರಲ್ಲ. ಈಗಾಗಲೇ ಬ್ರೆಜಿಲ್ ಏಳು ಬಾರಿ ವಿಶ್ವಕಪ್ ಫೈನಲ್ ತಲುಪಿದೆ. ಅಲ್ಲಿ ಪ್ರತಿಭಾವಂತ ಆಟಗಾರರಿಗೆ, ಅವರಿಗೆ ಎಲ್ಲ ಬಗೆಯ ಉತ್ತೇಜನ ನೀಡುವ ಕ್ಲಬ್ಗಳೂ ಇವೆ. ಹಿಂದೆ ಜರ್ಮನಿಯನ್ನು ಬ್ರೆಜಿಲ್ ತಂಡ ಸೋಲಿಸಿತ್ತು.
ಅದು ಈಗ ನೆನಪು ಮಾತ್ರ. ಈ ಬಾರಿ ಆತಿಥೇಯ ರಾಷ್ಟ್ರವಾಗಿ ಬ್ರೆಜಿಲ್ಗೆ ಗೆಲ್ಲುವ ಅಗತ್ಯವಿತ್ತು. ಅದಕ್ಕಾಗಿ ತಯಾರಿಯೂ ನಡೆದಿತ್ತು. ಆದರೂ 7-1 ಗೋಲುಗಳ ಅಂತರದ ಹೀನಾಯ ಸೋಲು ಅಲ್ಲಿನ ರಾಷ್ಟ್ರೀಯ ಹೆಮ್ಮೆಗೇ ಭಾರಿ ಪೆಟ್ಟು ಎನ್ನುವುದು ನಿಜ.