ಕೇವಲ ಒಂದು ಅಕ್ಷರ ತಪ್ಪಾಗುವುದರಿಂದ ಸಂಪೂರ್ಣ ಶಬ್ದದ ಅರ್ಥವೇ ಬದಲಾಗಿಬಿಡುವ, ಅಪಾರ್ಥಕ್ಕೆ ಕಾರಣವಾಗುವ ಅದೆಷ್ಟೋ ಉದಾಹರಣೆಗಳಿವೆ. ಈ ಹಿಂದೆ ಅಂತಹ ಕೆಲವು ತಪ್ಪುಗಳನ್ನು ಈ ಅಂಕಣದಲ್ಲಿ ಪ್ರಸ್ತಾಪಿಸಲಾಗಿದೆ. ಅಂತಹ ತಪ್ಪೊಂದರ ಬಗ್ಗೆ ಬಸವನಗುಡಿ ಯಿಂದ ಎಂ.ವಿ. ಜಗನ್ನಾಥ್ ಅವರು ಗಮನ ಸೆಳೆದಿದ್ದಾರೆ. ಕಚೇರಿಗೆ ದೂರವಾಣಿ ಕರೆ ಮಾಡಿದ ಅವರು, '3-4 ದಿನದಿಂದ ಪತ್ರಿಕೆಯ 'ನಗರ ಕಾರ್ಯಕ್ರಮ' ವಿಭಾಗದಲ್ಲಿ ಒಂದು ತಪ್ಪು ಪ್ರಕಟವಾಗುತ್ತಿದೆ. ರಾಘವೇಂದ್ರ ಮಠದ ಕಾರ್ಯಕ್ರಮದ ವಿವರದಲ್ಲಿ 'ಕಾಮಧೇನು ಕ್ಷೇತ್ರ' ಎಂದಿರಬೇಕಾದಲ್ಲಿ 'ಧೇನು' ಬಿಟ್ಟುಹೋಗುತ್ತಿದೆ. ಇದು ಸುಮಾರು 6-7 ದಿನ ಪ್ರಕಟವಾಗಿದೆ. ಯಾರೂ ಈವರೆಗೆ ನಿಮ್ಮ ಗಮನಕ್ಕೆ ತಂದಿಲ್ಲವೋ?' ಎಂದು ಪ್ರಶ್ನಿಸಿದ್ದಾರೆ.
ಜು.17ರ ಪತ್ರಿಕೆಯಲ್ಲಾಗಿರುವ ತಪ್ಪಿನ ಕುರಿತು ಬೆಂಗಳೂರಿನ ಸೀತಾರಾಮ ಶಾಸ್ತ್ರಿ ಅವರು ಕಚೇರಿಗೆ ದೂರವಾಣಿ ಕರೆ ಮಾಡಿದ್ದಾರೆ. ಒಂದೇ ಸುದ್ದಿಯಲ್ಲಿ 2-4 ತಪ್ಪಾಗಿರುವ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಪತ್ರಿಕೆಯ ಪುಟ 12ರಲ್ಲಿ (ಬೆಂಗಳೂರು ಆವೃತ್ತಿ) 'ಪ್ರವಾಹದಲ್ಲಿ ಸಿಕ್ಕಿಕೊಂಡ ಬಾಬಾ ರಾಮದೇವ್, 400 ವಿದ್ಯಾರ್ಥಿಗಳು' ಎಂಬ ಶೀರ್ಷಿಕೆಯಲ್ಲಿ ಸುದ್ದಿಯೊಂದನ್ನು ಪ್ರಕಟಿಸಲಾಗಿದೆ.'
'ಸುದ್ದಿಯ ಮೊದಲ ವಾಕ್ಯ 'ಭಾರೀ ಮಳೆಯಾಗುತ್ತಿದೆ. ಪ್ರವಾಹ ಬರುತ್ತೆ ಎಂಬ ಎಚ್ಚರಿಕೆ ನೀಡಿದ್ದರೂ ಸಹ, ಚಾರ್ಧಾಮ್ ಯಾತ್ರೆಗೆ ಹೋದ ಬಾಬಾ ರಾಮ್ದೇವ್ ಮತ್ತವರ 400 ಮಂದಿ ಬೆಂಬಲಿಗರು ಪ್ರವಾಸಕ್ಕೆ ಸಿಲುಕಿದ್ದಾರೆ' ಎಂದಿದೆ. ಮೊದಲ ವಾಕ್ಯದಲ್ಲೇ ಮೂರು ತಪ್ಪುಗಳಿವೆ. 'ಪ್ರವಾಹಕ್ಕೆ ಸಿಲುಕಿದ್ದಾರೆ' ಎಂಬುದು 'ಪ್ರವಾಸಕ್ಕೆ ಸಿಲುಕಿದ್ದಾರೆ' ಎಂದಾಗಿದೆ. 'ಎಚ್ಚರಿಕೆ ನೀಡಿದ್ದರೂ ಸಹ' ಎಂಬ ಬಳಕೆ ತಪ್ಪು. 'ಎಚ್ಚರಿಕೆ ನೀಡಿದ್ದರೂ' ಅಥವಾ 'ಎಚ್ಚರಿಕೆ ನೀಡಿದ್ದರು ಸಹ' ಎಂದಾಗಬೇಕಿತ್ತು.'
'ಶೀರ್ಷಿಕೆಯಲ್ಲಿ '400 ವಿದ್ಯಾರ್ಥಿಗಳು' ಎಂದಿದೆ. ಸುದ್ದಿಯ ಮೊದಲ ವಾಕ್ಯದಲ್ಲಿ '400 ಮಂದಿ ಬೆಂಬಲಿಗರು' ಎಂದಿದೆ.'
'ಸುದ್ದಿಯ ಮಧ್ಯಭಾಗದಲ್ಲಿ 'ಜೋಶಿಮಠದಲ್ಲೂ ಭಾರೀ ಮಳೆಯಿಂದಾಗಿ ಅಲಕಾನಂದಾ ಮತ್ತು ಮಂದಾಕಿಣಿ' ನದಿ ತುಂಬಿ ಹರಿಯುತ್ತಿದೆ' ಎಂದಿದೆ. 'ಮಂದಾಕಿನಿ'ಯನ್ನು 'ಮಂದಾಕಿಣಿ' ಎಂದು ಕೊಂಕಣಿ ಜಾತಿಗೆ ಸೇರಿಸಿದವರು ಯಾರು? 'ಕಿಣಿ' ಎಂಬುದು ಜಾತಿ ಸೂಚಕ. ಆದರೆ ನದಿ ಹೆಸರು 'ಮಂದಾಕಿನಿ'. ಹುಡುಗಿಯ ಹೆಸರು ಅಥವಾ ನದಿಯ ಹೆಸರು 'ಮಂದಾಕಿನಿ' ಎಂಬುದರ ಅರಿವಿಲ್ಲದ ಪತ್ರಕರ್ತರೂ ಇದ್ದಾರಾ? ಹಾಗೆಯೇ 'ಅಲಕಾನಂದಾ' ಎಂಬ ನದಿ ಎಲ್ಲಿದೆ? ಅದು 'ಅಲಕ್ನಂದಾ'. ಇಂತಹ ಸಾಮಾನ್ಯ ವಿಷಯಗಳು ಪತ್ರಕರ್ತರಿಗೆ ಗೊತ್ತಿರಬೇಕಲ್ಲವೇ?'
'ಸುದ್ದಿಯ ಅಂತಿಮ ಸಾಲಿನಲ್ಲಿ ಉತ್ತರಾಖಂಡದ ಜಿಲ್ಲೆಗಳ ಕೆಸರಿನಲ್ಲಿ 'ಅಲ್ಮೋಡ' ಎಂಬ ಹೆಸರಿದೆ. ಅಲ್ಲಿ ಮೋಡವಿರುವುದರಿಂದಲೇ ಅಷ್ಟೆಲ್ಲ ಮಳೆಬಂದಿರುವುದು ಎಂಬುದು ಓದುಗರಿಗೆ ಅರ್ಥವಾಗುತ್ತದೆ. ಆದರೆ ಉತ್ತರಾಖಂಡ ರಾಜ್ಯದಲ್ಲಿ ಅಂತಹ ಹೆಸರಿನ ಯಾವುದೇ ಜಿಲ್ಲೆಯಿಲ್ಲ. ಅಲ್ಲಿರುವುದು 'ಅಲ್ಮೋರ' ಜಿಲ್ಲೆ. ಅದು ಹೇಗೆ ನಿಮ್ಮ ಸಿಬ್ಬಂದಿ ಅದನ್ನು 'ಅಲ್ಮೋಡ' ಮಾಡಿದರೋ ಪರಮಾತ್ಮನೇ ಬಲ್ಲ. ಮೋಡಕವಿದ ವಾತಾವರಣ ಇದ್ದಿದ್ದರಿಂದ ಹಾಗಾಯಿತೋ ಏನೋ?' ಎಂದಿದ್ದಾರೆ.
ಎಲ್ಲ ಭಾಷೆ, ದೇಶಗಳ ಊರು, ನದಿಗಳ ಹೆಸರು ಸರಿಯಾಗಿ ತಿಳಿದಿರಲು ಸಾಧ್ಯವಿಲ್ಲ. ಯಾಕೆಂದರೆ ಅಲ್ಲಿನ ಭಾಷೆ, ಉಚ್ಚಾರದಲ್ಲಿ ವ್ಯತ್ಯಾಸವಿರುತ್ತದೆ. ಆದರೆ ನಮ್ಮದೇ ದೇಶದ ನದಿ, ಜಿಲ್ಲೆ, ರಾಜ್ಯಗಳ ಹೆಸರು ಸರಿಯಾಗಿ ಗೊತ್ತಿಲ್ಲವೆಂದರೆ ಓದದಿರುವುದೇ ಅದಕ್ಕೆ ಕಾರಣ.
ವಿಶ್ವೇಶ್ವರ ಭಟ್