ಇನ್ನು ಮೂರೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಗಮನಿಸಿ, ಮೀಸಲು ಸ್ಥಾನಗಳನ್ನು ಹೆಚ್ಚಿಸುವ ಮೂಲಕ ಜನರ ಮತವನ್ನು ಗಳಿಸುವ ತಂತ್ರದ ಪ್ರಯೋಗಕ್ಕೆ ಮಹಾರಾಷ್ಟ್ರ ಸರ್ಕಾರ ಸಜ್ಜಾಗಿದೆ. ಸರ್ಕಾರದ ಹೊಸ ಚಿಂತನೆಯಂತೆ ಈಗಿನ ಮೀಸಲು ಸ್ಥಾನಗಳ ಜತೆಯಲ್ಲೇ ಹಿಂದುಳಿದ ಮರಾಠಾ ಸಮುದಾಯಕ್ಕೆ ಶೇಕಡಾ ಹದಿನಾರರಷ್ಟು ಮೀಸಲು ನಿಯಮವನ್ನು ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ನೌಕರಿಗಳಲ್ಲಿ ಜಾರಿಗೊಳಿಸಲಾಗುವುದು. ಮುಸ್ಲಿಮರಿಗೆ ಶೇಕಡಾ ಆರರಷ್ಟು ಮೀಸಲು ನಿಯಮವೂ ಬರಲಿದೆ.
ಈ ಕ್ರಮದಿಂದ ಮಹಾರಾಷ್ಟ್ರದಲ್ಲಿ ಒಟ್ಟು ಮೀಸಲು ಸ್ಥಾನಗಳ ಸಂಖ್ಯೆ ಒಟ್ಟು ಸ್ಥಾನಗಳ ಶೇಕಡಾ 73 ರಷ್ಟಾಗುವುದು. ಇಂತಹ ನಿಯಮವನ್ನು ಈಗಿನ ಪರಿಸ್ಥಿತಿಯಲ್ಲಿ ಜಾರಿಗೆ ತರುವುದು ಸಾಧ್ಯವಿಲ್ಲ ಎನ್ನುವುದು ಸರ್ಕಾರಕ್ಕೆ ಗೊತ್ತಿದ್ದರೂ ಇಂತಹ ನೀತಿ ಪ್ರಕಟವಾಗಿರುವುದು ಚುನಾವಣೆಯ ದೃಷ್ಟಿಯಿಂದಲೇ. ಸಂವಿಧಾನದ ವಿಧಿ ನಿಯಮಗಳಂತೆ, ಪರಿಶಿಷ್ಟ ಜನಾಂಗ, ಹಾಗೂ ಇತರೆ ಹಿಂದುಳಿದ ಜಾತಿ ಪಂಗಡಗಳವರಿಗೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ನೌಕರಿಯಲ್ಲಿ ಮೀಸಲು ಸ್ಥಾನಗಳನ್ನು ಒದಗಿಸುವುದಕ್ಕೆ ಅವಕಾಶವಿದೆ.
ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಹಾಗೂ ಶೈಕ್ಷಣಿಕ ವಲಯದಲ್ಲಿ ತೀರ ಹಿಂದುಳಿದಿರುವ ದುರ್ಬಲ ವರ್ಗಗಳಿಗೆ ಮೀಸಲು ನಿಯಮ ಜಾರಿಗೆ ತರುವುದು ಸಂವಿಧಾನದ ವಿಶೇಷ ನಿಯಮದಿಂದ ಸಾಧ್ಯವಾಗಿದೆ. ಅದು ಒಳ್ಳೆಯದೇ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಜಾತಿ ಪಂಗಡಗಳವರಿಗೆ ಸಮಾಜದಲ್ಲಿ ಗೌರವವಾದ ಸ್ಥಾನ-ಮಾನವನ್ನು ಗಳಿಸಲು ಇಂತಹ ಮೀಸಲು ಪದ್ಧತಿ ಅಗತ್ಯ ಹಾಗೂ ಅನಿವಾರ್ಯ.
ಸುಮಾರು ಆರು ದಶಕಗಳಿಂದಲೂ ಈ ಮೀಸಲು ನಿಯಮ ಜಾರಿಯಲ್ಲಿದೆ. ದೇಶದ ಎಲ್ಲ ರಾಜ್ಯಗಳಲ್ಲೂ ಸರ್ಕಾರಗಳು ಈ ನಿಯಮವನ್ನು ಉತ್ಸಾಹದಿಂದ ಕಟ್ಟುನಿಟ್ಟಾಗಿ ಜಾರಿಗೆ ತಂದಿವೆ ಎಂದೇನೂ ಅಲ್ಲ. ಆದರೆ ಕೆಲವು ರಾಜ್ಯಗಳಲ್ಲಿ, ಉದಾಹರಣೆಗೆ ತಮಿಳುನಾಡು, ಕೇರಳ, ಈಚಿನ ದಿನಗಳಲ್ಲಿ ಉತ್ತರಪ್ರದೇಶ, ಬಿಹಾರಗಳಲ್ಲಿ ಮೀಸಲು ಚಳವಳಿ ದೊಡ್ಡ ರೀತಿಯಲ್ಲೇ ನಡೆದಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಈ ಮೀಸಲು ನಿಯಮ ದುರ್ಬಲ ವರ್ಗಗಳ ಏಳಿಗೆಗಿಂತ ಹೆಚ್ಚಾಗಿ ಓಟು ಬ್ಯಾಂಕ್ಗಳ ನಿರ್ಮಾಣಕ್ಕೆ ಬಳಕೆಯಾಗಿದೆ ಎನ್ನುವುದೂ ನಿಜ. ಆರು ದಶಕಗಳಲ್ಲಿ ಪರಿಸ್ಥಿತಿಯಲ್ಲಿ ಬದಲಾವಣೆ ಆಗಿಲ್ಲವೇ?
ಈ ಮೀಸಲು ನಿಯಮದ ಕಾಯಿದೆಗಳು ಸುಪ್ರೀಮ್ ಕೋರ್ಟಿನ ಮುಂದೆ ಪರಿಶೀಲನೆಗೆ ಬಂದಾಗ, ಯಾವುದೇ ಕಾರಣಕ್ಕೂ ಮೀಸಲು ಸ್ಥಾನಗಳ ಸಂಖ್ಯೆ, ಒಟ್ಟು ಸ್ಥಾನಗಳ ಅರ್ಧಕ್ಕಿಂತ ಹೆಚ್ಚಾಗಬಾರದು ಎನ್ನುವ ತೀರ್ಪು ಹೊರಬಿದ್ದಿದೆ. ಈ ತೀರ್ಪಿಗೆ ಎಲ್ಲ ರಾಜ್ಯಗಳಲ್ಲೂ ಸರ್ಕಾರಗಳು ಬದ್ಧ. ಆದರೆ ವಿಶಿಷ್ಟ ಕಾರಣಗಳಿಂದಾಗಿ, ತಮಿಳುನಾಡಿನಲ್ಲಿ ಮಾತ್ರ ಶೇಕಡಾ 69 ರಷ್ಟು ಮೀಸಲು ನಿಯಮ ಜಾರಿಯಲ್ಲಿದೆ. ಆ ರಾಜ್ಯದ ಕಾಯಿದೆಗೆ ಸಂವಿಧಾನದಲ್ಲಿ ಸಿಂಧುತ್ವವಿದೆ.
ಹಿಂದೆ ಆಂಧ್ರಪ್ರದೇಶ ಸರ್ಕಾರ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲು ನಿಯಮದ ಕಾಯಿದೆ ಜಾರಿಗೊಳಿಸಲು ಪ್ರಯತ್ನಿಸಿದಾಗ ರಾಜ್ಯ ಹೈಕೋರ್ಟ್ ಆ ಆದೇಶವನ್ನು ಅಸಿಂಧುಗೊಳಿಸಿತ್ತು. ಸುಪ್ರೀಮ್ ಕೋರ್ಟಿನ ಕಡತದಲ್ಲಿ ಈ ಪ್ರಕರಣದ ಅಪೀಲು ಇದೆ. ಆದರೆ ಆಂಧ್ರಪ್ರದೇಶದ ಹೈಕೋರ್ಟ್ನ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಲು ನಿರಾಕರಿಸಲಾಯಿತು. ಒಮ್ಮೆ ಕೇಂದ್ರ ಸರ್ಕಾರ ಮುಸ್ಲಿಮರಿಗೆ ಶೇಕಡಾ 4.6 ರಷ್ಟು ಮೀಸಲು ಸ್ಥಾನಗಳ ನಿಯಮದ ಪ್ರಸ್ತಾಪವನ್ನು ಮುಂದಿಟ್ಟಾಗ ಉಚ್ಚ ನ್ಯಾಯಾಲಯ ಅದನ್ನು ಒಪ್ಪಲಿಲ್ಲ. ಆದರೆ ವಿಚಾರಣೆಗೆ ಸಮ್ಮತಿಸಿತು. ಇನ್ನೂ ವಿಚಾರಣೆಯಾಗಿಲ್ಲ. ಇಷ್ಟೆಲ್ಲ ವಿವರಗಳನ್ನು ತಿಳಿದುಕೊಂಡಿದ್ದರೂ ಮಹಾರಾಷ್ಟ್ರದ ಕಾಂಗ್ರೆಸ್ - ರಾಷ್ಟ್ರೀಯತಾ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಪ್ರಬಲವಾದ ಮರಾಠಾ ಜನಾಂಗಕ್ಕೆ ಮೀಸಲು ಸ್ಥಾನಗಳ ವ್ಯವಸ್ಥೆಗೆ ವಿಶೇಷ ಕಾಯಿದೆ ತರುವ ಪ್ರಯತ್ನ ನಡೆಸಿರುವುದನ್ನು ಅಲ್ಲಿನ ಇತರೆ ಹಿಂದುಳಿದ ಜಾತಿ - ಪಂಗಡಗಳ ಸಂಘಟನೆಗಳು ಪ್ರತಿಭಟಿಸಿವೆ.
ಮರಾಠಾ ಸಮಾಜ ಈಗ ಮಹಾರಾಷ್ಟ್ರದಲ್ಲಿ ನಿಸ್ಸಂದೇಹವಾಗಿ ರಾಜಕೀಯವಾಗಿ, ಸಾಮಾಜಿಕವಾಗಿ ಅತ್ಯಂತ ಪ್ರಭಾವಶಾಲಿ ಸಮುದಾಯ. ಅಂತಹ ಸಮುದಾಯಕ್ಕೂ ಮೀಸಲು ಸೌಲಭ್ಯವನ್ನು ನೀಡಲು ಹೊರಟಿರುವುದು ನಿಜವಾದ ಹಿಂದುಳಿದ, ದುರ್ಬಲ ಜಾತಿಗಳಿಗೆ ಅಪಮಾನ ಮಾಡಿದಂತೆ. ಈ ವರ್ತನೆ ಸರ್ಕಾರಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ.