ಜೈನರು ಶಾಂತಿ ಪ್ರಿಯರು, ಅಹಿಂಸಾ ಪ್ರಿಯರು ಆಗಿರುವಂತೆ ಪ್ರಾಣಿದಯೆ ಉಳ್ಳವರೂ ಆಗಿದ್ದಾರೆ.
ದಿಗಂಬರ ಜೈನ ಪಂಚಾಯತ್ರವರ ಪರಿಶ್ರಮದಿಂದ ಸ್ಥಾಪನೆಯಾದ ಪಕ್ಷಿ ಆಸ್ಪತ್ರೆ ದೆಹಲಿಯ ಚಾಂದನಿ ಚೌಕದಲ್ಲಿ ಕೆಂಪುಕೋಟೆಯ ಬಳಿ ಇದೆ. ಇಲ್ಲಿನ ವಿಶೇಷವೆಂದರೆ ಇಲ್ಲಿ ಸಾಮಾನ್ಯ ಆಸ್ಪತ್ರೆಗಳಂತೆ ಹೊರರೋಗಿ ವಿಭಾಗ, ವಾರ್ಡ್ಗಳು, ಶಸ್ತ್ರಚಿಕಿತ್ಸಾ ಕೊಠಡಿ ಇವೆ. ಆದರೆ ಹವಾನಿಯಂತ್ರಿತ ವಿಶೇಷ ಕೊಠಡಿಗಳಿಲ್ಲ. ಇಲ್ಲಿ ಪ್ರತಿನಿತ್ಯ ನೂರಾರು ಹಕ್ಕಿಗಳಿಗೆ ಸಮಾನವಾಗಿ ಶುಶ್ರೂಷೆ ನಡೆಯುತ್ತಿರುತ್ತದೆ. 1929ರಲ್ಲಿ ಸ್ಥಾಪನೆಯಾದ ಈ ಆಸ್ಪತ್ರೆಯಲ್ಲೀಗ 500ಕ್ಕೂ ಹೆಚ್ಚು ಪಕ್ಷಿಗಳು ಒಳರೋಗಿಗಳಾಗಿ ಸೇರಿ ಚಿಕಿತ್ಸೆ ಪಡೆಯುತ್ತಿವೆ. ಅಲ್ಲದೆ ಹತ್ತು ಸಾವಿರಕ್ಕೂ ಹೆಚ್ಚು ಅಂಗವಿಕಲ ಮತ್ತು ಮುದಿ ಪಕ್ಷಿಗಳಿಗೆ ಇಲ್ಲಿ ಆಶ್ರಯ ನೀಡಲಾಗಿದೆ. ಸಾಮಾನ್ಯವಾಗಿ ಒಳರೋಗಿಯಾಗಿ ಸೇರಿದ ಹಕ್ಕಿ ಗುಣಹೊಂದಿದ ಮೇಲೆ ಸ್ವತಂತ್ರವಾಗಿ ಹಾರಿಬಿಡಲಾಗುವುದು. ಅದನ್ನೆಂದೂ ಅದರ ಮಾಲೀಕನಿಗೆ ನೀಡಲಾಗುವುದಿಲ್ಲ. ಈ ಆಸ್ಪತ್ರೆಯಲ್ಲಿ ಯಾವುದಾದರೂ ಪಕ್ಷಿ ಮರಣಕ್ಕೀಡಾದರೆ ಯೋಗ್ಯ ಸಂಸ್ಕಾರ ಕೂಡ ಮಾಡಲಾಗುವುದು. ಇಲ್ಲಿ ಪಶುವೈದ್ಯಕೀಯ ಪದವೀಧರ ವೈದ್ಯರುಗಳು ದಿನದ ಇಪ್ಪತ್ತನಾಲ್ಕುಗಂಟೆಗಳೂ ಸಹ ಸೇವೆ ಸಲ್ಲಿಸುತ್ತಾರೆ. ಇದೊಂದು ಉಚಿತ ಆಸ್ಪತ್ರೆಯಾಗಿದ್ದು, ನೌಕರರ ಸಂಬಳ, ಪಕ್ಷಿಗಳಿಗೆ ಆಹಾರ, ಔಷಧಿ ಇವಕ್ಕೆಲ್ಲಾ ದೇಣಿಗೆಯನ್ನೇ ಅವಲಂಬಿಸಲಾಗಿದೆ. ಇದು ಪಕ್ಷಿಗಳಿಗಾಗಿಯೇ ಸ್ಥಾಪಿತವಾದ ವಿಶ್ವದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇಲ್ಲಿ ಹಿಂಸಾ ಪಕ್ಷಿಗಳಿಗೆ ಮಾತ್ರ ಪ್ರವೇಶವಿಲ್ಲ. ಜೈನರು ಅಹಿಂಸಾ ಪ್ರೇಮಿಗಳಾಗಿರುವುದರಿಂದ ಈ ನಿಯಮವನ್ನಿಲ್ಲಿ ಕಟ್ಟುನಿಟ್ಟಾಗಿ ಪರಿಪಾಲಿಸಲಾಗುತ್ತದೆ. ಆಸ್ಪತ್ರೆಯ ಕಟ್ಟಡದ ಮೇಲೆ ಇಡೀ ಟೆರೇಸಿನ ಮೇಲೆ ಅಕ್ಕಿ, ಜೋಳ, ಗೋದಿ, ಸಜ್ಜೆ, ನವಣೆ, ಕಡಲೆ ಇವುಗಳನ್ನು ಧಾರಾಳವಾಗಿ ಚೆಲ್ಲಲಾಗಿದೆ. ಅಲ್ಲೊಂದು ತಿಳಿನೀರ ಕೊಳವನ್ನೂ ನಿರ್ಮಿಸಲಾಗಿದೆ. ಇದೊಂದು ಹಕ್ಕಿಗಳ ನೆಂಟರ ಮನೆ ಎನ್ನಬಹುದು! ಇಲ್ಲಿನ ಸಿಬ್ಬಂದಿ ಹಕ್ಕಿಗಳ ಬಗ್ಗೆ ಮಮಕಾರ ಹೊಂದಿರುವವರೇ ಆಗಿದ್ದಾರೆ. ಒಟ್ಟಿನಲ್ಲಿ ಮೂಕಪಕ್ಷಿಗಳನ್ನೂ ಪ್ರೀತಿಯಿಂದ ಆದರಿಸುವ, ತಾಳ್ಮೆಯಿಂದ ಆರೈಕೆ ಮಾಡುವ ಸಜ್ಜನಿಕೆ ಮತ್ತು ಹೃದಯವಂತಿಕೆಯನ್ನಿಲ್ಲಿ ಕಾಣಬಹುದಾಗಿದೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com