ಸ್ವಾರಸ್ಯ

ವಯಸ್ಸಿನ ಚಿಂತೆಯಿಲ್ಲ, ಚುನಾವಣೆ ಬಂದರೆ ಉತ್ಸಾಹದಿಂದ ಮತ ಹಾಕುವ ಶತಾಯುಷಿಗಳು ಇವರು!

Sumana Upadhyaya
ಬೆಂಗಳೂರು: ನಿಘಂಟು ತಜ್ಞ ಪ್ರೊ, ಜಿ ವೆಂಕಟಸುಬ್ಬಯ್ಯ 106ರ ಈ ಇಳಿವಯಸ್ಸಿನಲ್ಲಿ ಕೂಡ ನಾಡಿದ್ದು ಏಪ್ರಿಲ್ 18ರಂದು ಮತ ಚಲಾಯಿಸುವ ಉತ್ಸಾಹದಲ್ಲಿದ್ದಾರೆ. 1951ರಿಂದ ಅವರು ತಮ್ಮ ಮತದಾನದ ಹಕ್ಕು ಚಲಾಯಿಸಿಕೊಂಡು ಬರುತ್ತಿದ್ದು ಇದು ಅವರು ಕಾಣುತ್ತಿರುವ 17ನೇ ಲೋಕಸಭೆ ಚುನಾವಣೆ.
ಕರ್ನಾಟಕ ರಾಜ್ಯದಲ್ಲಿ ಶತಾಯುಷ್ಯ ಪೂರೈಸಿದ 5 ಸಾವಿರದ 579 ಮತದಾರರಿದ್ದು ಅವರು ಇದೇ ತಿಂಗಳು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಹಕ್ಕು ಚಲಾಯಿಸಲಿದ್ದಾರೆ.
ನಾನು 18ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿಲ್ಲ. ಬದಲಾಗಿ 38ನೇ ವರ್ಷಕ್ಕೆ 1951ರಲ್ಲಿ ಮೊದಲ ಬಾರಿಗೆ ಹಕ್ಕು ಚಲಾಯಿಸಿದೆ. ಆಗ ಇದ್ದದ್ದು ಮೈಸೂರು ರಾಜ್ಯ. ವಿಧಾನಸಭೆ ಚುನಾವಣೆಗೆ ಮತದಾನ ಮಾಡಿದ್ದೆ. ನಂತರ ಒಂದು ಬಾರಿ ಕೂಡ ತಪ್ಪಿಸಲಿಲ್ಲ. ನಗರಪಾಲಿಕೆ ಚುನಾವಣೆಯಲ್ಲಿ ಕೂಡ ಮತದಾನ ಮಾಡುತ್ತೇನೆ. ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕೂಡ ಮತದಾನ ಮಾಡುತ್ತೇನೆ ಎನ್ನುತ್ತಾರೆ ಪ್ರೊ ಜಿ ವೆಂಕಟಸುಬ್ಬಯ್ಯನವರು.
ಅಂದಿನ ಕಾಲದಲ್ಲಿ ಚುನಾವಣಾ ಪ್ರಚಾರ ಒಂದು ಕಡೆ ಸ್ಥಳದಲ್ಲಿ ನಡೆಯುತ್ತಿತ್ತು. ಅಲ್ಲಿ ಜನ ಸೇರುತ್ತಿದ್ದರು. ಅದು ಯಾವ ಎಲೆಕ್ಷನ್ ಯಾರು ನಿಂತಿದ್ದರು ಎಂದು ನೆನಪಿಲ್ಲ, ಗಾಂಧಿ ಬಜಾರ್ ನಲ್ಲಿ ಒಂದೇ ಸೂರಿನಡಿ ಇಬ್ಬರು ಪ್ರತಿಸ್ಪರ್ಧಿಗಳು ಪ್ರಚಾರ ನಡೆಸಿದ್ದನ್ನು ನೋಡಿದ ನೆನಪಿದೆ. ಇಂದಿನ ಥರ ಜಗಳ, ಕಿತ್ತಾಟ, ಪರಸ್ಪರ ಆರೋಪಗಳಿರಲಿಲ್ಲ. ಜನರಿಗೆ ಉಪಯೋಗವಾಗುವ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು ಎಂದರು.
ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಳಿಕಲ್ ಗ್ರಾಮದಲ್ಲಿ ಮತ ಚಲಾಯಿಸಲಿದ್ದಾರೆ. ಅವರು ಕೂಡ ಶತಾಯುಷ್ಯವನ್ನು ಪೂರೈಸಿದವರು. ಅವರು ಬೆಂಗಳೂರಿನಲ್ಲಿ ತಮ್ಮ ದತ್ತು ಪುತ್ರನೊಂದಿಗೆ ನೆಲೆಸಿದ್ದಾರೆ. ಸಾಲುಮರದ ತಿಮ್ಮಕ್ಕನವರು ಯಾವ ಎಲೆಕ್ಷನ್ ನ್ನೂ ತಪ್ಪಿಸದೆ ತಮ್ಮ ಮತ ಚಲಾಯಿಸಿದ್ದಾರೆ ಎನ್ನುತ್ತಾರೆ ಅವರ ದತ್ತುಪುತ್ರ ಉಮೇಶ್.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಕಳೆದ ವರ್ಷ ಶತಾಯುಷ್ಯವನ್ನು ಪೂರೈಸಿದ್ದಾರೆ. ಅವರು ಕೂಡ ಬೆಂಗಳೂರಿನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು.
SCROLL FOR NEXT