ಸ್ವಾರಸ್ಯ

ಭಾರತದ ಮೊದಲ ಮತದಾರನಿಂದ 17ನೇ ಲೋಕಸಭೆ ಚುನಾವಣೆಯಲ್ಲಿ ಹಕ್ಕು ಚಲಾವಣೆ

Raghavendra Adiga
ಕಲ್ಪಾ: ಇವರು ಭಾರತದ ಮೊದಲ ಮತದಾರ! ದೇಶದ ಮೊದಲ ಲೋಕಸಭೆಗೆ 1951ರಲ್ಲಿ ಮತ ಚಲಾಯಿಸಿದ್ದ ವ್ಯಕ್ತಿ ಈ ಬಾರಿಯ ಚುನಾವಣೆಯಲ್ಲಿ ಸಹ ಮತ್ತೊಮ್ಮೆ ಅದೇ ಕ್ಷೇತ್ರ, ಅದೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 103 ವರ್ಷದ ಶ್ಯಾಮ್ ಸರನ್ ನೇಗಿ ಕಲ್ಕಾ ಗ್ರಾಮದ ಮತಗಟ್ಟೆಯಲ್ಲಿ ಭಾನುವಾರ ಮತ ಚಲಾಯಿಸಿದ್ದು ಇದುವರೆಗೆ ನೇಗಿ ಇದೇ ಮತಗಟ್ಟೆಯಲ್ಲಿ 32 ಬಾರಿ ವೋಟ್ ಮಾಡಿದ್ದಾರೆ.
ವಿಶೇಷವೆಂದರೆ ನೇಗಿಯವರಿಗೆ ಅವರ ಮನೆ ಸಮೀಪದ ಪ್ರಾಥಮಿಕ ಶಾಲೆಯಲ್ಲಿರುವ ಮತಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಲು ಚುನಾವಣಾಧಿಕಾರಿಗಳು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದರು. ಅಲ್ಲದೆ ವೈದ್ಯರು ನೇಗಿಯವರ ಆರೋಗ್ಯ ತಪಾಸಣೆ ಸಹ ನಿಯತವಾಗಿ ಮಾಡುತ್ತಾ ಬಂದಿದ್ದಾರೆ.
1890ರಲ್ಲಿ ಸ್ಥಾಪಿತವಾಗಿರುವ ಪ್ರಥಮ್ ಪ್ರಾಥಮಿಕವಿದ್ಯಾಲಯ ಶಾಲೆಯ ಮತಗಟ್ಟೆಯಲ್ಲಿ ನೇಗಿಯವರಿಗೆ ಕೆಂಪು ಹಾಸಿನ ಸ್ವಾಗತ ಕೋರಲಾಗಿತ್ತು. ಸ್ವಾತಂತ್ರದ ನಂತರ ಪ್ರಥಮ ಬಾರಿಗೆ ನಡೆದಿದ್ದ 1951ರ ಲೋಕಸಭೆ ಮಹಾಚುನಾವಣೆಗೆ ಸಹ ನೇಗಿ ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದ್ದು ಇದರಿಂದೀಚೆಗೆ ಪ್ರತೀ ಚುನಾವಣೆಯಲ್ಲಿಯೂ ಅವರು ತಪ್ಪದೆ ಮತ ಚಲಾಯಿಸುತ್ತಿದ್ದಾರೆ.
ಇದುವರೆಗೆ ನಡೆದಿದ್ದ 16 ಲೋಕಸಭೆ ಚುನಾವಣೆಗೆ ಮತದಾನ ಮಾಡಿರುವ ನೇಗಿ ಇಂದು 17ನೇ ಲೋಕಸಭೆ ಚುನಾವಣೆಗೆ ಸಹ ಮತ ಹಾಕಿದ್ದಾರೆ. ಇದಲ್ಲದೆ ಅವರು 13 ವಿಧಾನಸಭೆ ಹಾಗೂ ಎರಡು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಹ ಮತದಾನ ಮಾಡುವ ಮೂಲಕ ಮಾದರಿ ನಾಗರಿಕರೆನಿಸಿದ್ದಾರೆ. 
SCROLL FOR NEXT