ದೇಶ

ಎಎಫ್ಎಸ್ ಪಿಎ ರದ್ದು ವಿರುದ್ಧ ಕೆಲ ಕಾಂಗ್ರೆಸ್ ಸ್ನೇಹಿತರಿಂದ ಸಂಚು: ಒಮರ್ ಅಬ್ದುಲ್ಲಾ

Lingaraj Badiger
ಬಾರಾಮುಲ್ಲಾ: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ(ಎಎಫ್‌ಎಸ್ ಪಿಎ) ತಿದ್ದುಪಡಿ ಭರವಸೆ ನೀಡಿದ್ದನ್ನು ಸ್ವಾಗತಿಸಿದ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫೆರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು, ತಡವಾಗಿಯಾದರೂ ಒಳ್ಳೆಯ ನಿರ್ಧಾರ ಎಂದಿದ್ದಾರೆ.
ಇದೇ ವೇಳೆ, ಈ ಹಿಂದೆ ಎಎಫ್ಎಸ್ ಪಿಎ ರದ್ದು ವಿರುದ್ಧ ಕೆಲ ಕಾಂಗ್ರೆಸ್ ಸ್ನೇಹಿತರು ಸಂಚು ರೂಪಿಸಿದ್ದರು ಎಂದು ಆರೋಪಿಸಿದ ಒಮರ್ ಅಬ್ದುಲ್ಲಾ, ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಈ ವಿವಾದಿತ ಕಾಯ್ದೆ ರದ್ದುಗೊಳಿಸುವಂತೆ ಒತ್ತಾಯಿಸಿದ್ದೆ. ಆದರೆ ಕೆಲ ಕಾಂಗ್ರೆಸ್ ನಾಯಕರು ವಿರೋಧಿಸಿದ್ದರು. ಆದರೆ ಚಿದಂಬರಂ(ಮಾಜಿ ಕೇಂದ್ರ ಸಚಿವ) ಅವರು ಬೆಂಬಲಿಸಿದ್ದರು ಎಂದು ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಎಫ್ಎಸ್ ಪಿಎ ಕಾಯ್ದೆ ತಿದ್ದುಪಡಿ ಭರವಸೆ ನೀಡಿದ್ದರೆ ಅದನ್ನು ಸ್ವಾಗತಿಸುತ್ತೇನೆ. 2014ಕ್ಕೂ ಮುನ್ನವೇ ಅವರು ಈ ಕೆಲಸ ಮಾಡಬೇಕಿತ್ತು. ತಡವಾಗಿಯಾದರೂ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಇಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಜಾರಿ ಇರುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ(ಎಎಫ್‌ಎಸ್ ಪಿಎ) ತಿದ್ದುಪಡಿ ಭರವಸೆ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.
SCROLL FOR NEXT