ದೇಶ

ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ರಾಷ್ಟ್ರಪತಿ ಕೋವಿಂದ್ ಸೂಚನೆ!

Srinivas Rao BV
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. 
ಚುನಾವಣೆ ಸಂದರ್ಭದಲ್ಲಿ ಪ್ರಧಾನಿಯನ್ನು ಹೊಗಳುವ ಮೂಲಕ ಕಲ್ಯಾಣ್ ಸಿಂಗ್ ಸಾಂವಿಧಾನಿಕ ಹುದ್ದೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ಚುನಾವಣಾ ಆಯೋಗ ಹೇಳಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸರ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ ಕಡತ ರವಾನೆ ಮಾಡಿದ್ದಾರೆ. 
ಪ್ರಧಾನಿಯೊಬ್ಬರ ಪರವಾಗಿ ಹಾಲಿ ರಾಜ್ಯಪಾಲರೊಬ್ಬರು ಚುನಾವಣೆ ಸಂದರ್ಭದಲ್ಲಿ ಹೇಳಿಕೆ ನೀಡಿ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಇದೇ ಮೊದಲ ಪ್ರಕರಣವಾಗಿದೆ. ರಾಜ್ಯಪಾಲರುಗಳಂತಹ ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಸಂಹಿತೆ ಅನ್ವಯವಾಗುವುದಿಲ್ಲ. ಆದರೆ ರಾಜಕೀಯದಿಂದ ರಾಜ್ಯಪಾಲರುಗಳು ಅಂತರ ಕಾಯ್ದುಕೊಳ್ಳಬೇಕೆಂದು ರಾಷ್ಟ್ರಪತಿ ಕೋವಿಂದ್ ಹೇಳಿದ್ದರು. 
ಕಲ್ಯಾಣ್ ಸಿಂಗ್ ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಕಾಂಗ್ರೆಸ್ ಪಕ್ಷ ರಾಷ್ಟ್ರಪತಿಗಳ ಭೇಟಿಗೆ ಅನುಮತಿ ಕೇಳಿತ್ತು. ಈ ನಡುವೆ ಚುನಾವಣಾ ಆಯೋಗವೂ ರಾಷ್ಟ್ರಪತಿಗಳಿಗೆ ಪತ್ರ ಬರೆದು ಸಂದರ್ಭದಲ್ಲಿ ಪ್ರಧಾನಿಯನ್ನು ಹೊಗಳುವ ಮೂಲಕ ಕಲ್ಯಾಣ್ ಸಿಂಗ್ ಸಾಂವಿಧಾನಿಕ ಹುದ್ದೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ಹೇಳಿತ್ತು. 
ದೇಶಕ್ಕಾಗಿ ಮೋದಿಯನ್ನು ಮರು ಆಯ್ಕೆ ಮಾಡುವುದು ಅಗತ್ಯ ಎಂದು ಕಲ್ಯಾಣ್ ಸಿಂಗ್ ಹೇಳಿದ್ದರು ಅಷ್ಟೇ ಅಲ್ಲದೇ ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತ ಸಹ ಕೆಲಸ ಮಾಡಬೇಕೆಂದು ಕರೆ ನೀಡಿದ್ದರು. 
SCROLL FOR NEXT