ದೇಶ

ಬಿಜೆಪಿ ಅಧಿಕಾರಕ್ಕೆ ಬಂದರೆ ಸೂಪರ್ ಸ್ಟಾರ್ ರಜಿನಿಕಾಂತ್ ನಿರೀಕ್ಷೆ ಏನು ಗೊತ್ತೇ?

Srinivas Rao BV
ಚೆನ್ನೈ: ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆಗೆ ಮತದಾನಕ್ಕೆ ಇನ್ನು 10 ದಿನಗಳಷ್ಟೇ ಬಾಕಿ ಇದ್ದು, ಚುನಾವಣೆ ಬಗ್ಗೆ ರಜಿನಿಕಾಂತ್ ಮಾತನಾಡಿದ್ದಾರೆ.
ಚೆನ್ನೈ ನ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ರಜಿನಿಕಾಂತ್ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ತಮ್ಮ ಬೇಡಿಕೆ, ನಿರೀಕ್ಷೆ ಏನಿರಲಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. 
ರಾಜಕೀಯದ ಬಗ್ಗೆ ಇತ್ತೀಚೆಗಷ್ಟೇ ತಮ್ಮ ನಿಲುವನ್ನು ಪ್ರಕಟಿಸಿದ್ದ ರಜಿನಿಕಾಂತ್ ಲೋಕಸಭಾ ಚುನಾವಣೆಗೆ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ. 2021 ಕ್ಕೆ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮಾತ್ರ ಗಮನ ಹರಿಸುವುದಾಗಿ ಹೇಳಿದ್ದರು. ಈಗ ಆ ನಿಲುವಿನಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ರಜಿನಿಕಾಂತ್ ಹೇಳಿದ್ದಾರೆ. 
ಇನ್ನು ಬಿಜೆಪಿ ಅಧಿಕಾರಕ್ಕೆ ಬಂದರೆ, ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವಂತೆ ನದಿ ಜೋಡಣೆಯ ಯೋಜನೆ ಪೂರ್ಣಗೊಳಿಸಬೇಕೆಂಬುದು ತಮ್ಮ ನಿರೀಕ್ಷೆ ಹಾಗೂ ಬೇಡಿಕೆಯಾಗಿರಲಿದೆ ಎಂದು ರಜಿನಿಕಾಂತ್ ಹೇಳಿದ್ದಾರೆ. 
ಇದೇ ವೇಳೆ ಕಮಲಹಾಸನ್ ಅವರ ಪಕ್ಷದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು ಈ ಬಗ್ಗೆ ನಾನು ಹೆಚ್ಚು ಮಾತಾನಾಡಲು ಬಯಸುವುದಿಲ್ಲ. ದಯವಿಟ್ಟು ನಮ್ಮ ಸ್ನೇಹವನ್ನು ಹಾಳುಮಾಡುವಂತಹ ವಿಷಯಗಳನ್ನು ಪ್ರಸ್ತಾಪಿಸಬೇಡಿ ಎಂದು ಹೇಳಿದ್ದಾರೆ. 
ನದಿ ಜೋಡಣೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಯೋಜನೆಯಾಗಿತ್ತು. ಅವರು ಪ್ರಧಾನಿಯಾಗಿದ್ದಾಗ ಒಮ್ಮೆ ಭೇಟಿ ಮಾಡಿ ಈ ಕುರಿತು ಮಾತನಾಡಿದ್ದೆ. ಇದು ದೊಡ್ಡ ಯೋಜನೆಯಾಗಿದ್ದರಿಂದ ಇದಕ್ಕೆ ಭಗೀರಥ ಯೋಜನೆಯೆಂದು ನಾಮಕರಣ ಮಾಡಬೇಕೆಂದು ಸಲಹೆ ನೀಡಿದ್ದೆ. ವಾಜಪೇಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ರಜಿನಿ ಹೇಳಿದ್ದಾರೆ. 
ಈ ಬಾರಿ ಬಿಜೆಪಿ ಪ್ರಣಾಳಿಕೆಯಲ್ಲಿ ನದಿ ಜೋಡಣೆ ಭರವಸೆ ನೀಡಿದ್ದಾರೆ. ದೇವರ ಆಶೀರ್ವಾದ ಹಾಗೂ ಜನತೆಯ ಬೆಂಬಲದಿಂದ ಅವರಿಗೆ ಯಾವ ರೀತಿಯ ಫಲಿತಾಂಶ ಸಿಗುತ್ತದೆ ನಮಗೆ ಗೊತ್ತಿಲ್ಲ ಆದರೆ ಎನ್ ಡಿಎ ಸರ್ಕಾರ ರಚಿಸಿದರೆ ಮೊದಲು ಮಾಡಬೇಕಿರುವ ಕೆಲಸ ನದಿ ಜೋಡಣೆಯದ್ದು ಎಂದು ರಜಿನಿ ತಮ್ಮ ಬೇಡಿಕೆಯನ್ನು ಬಹಿರಂಗಪಡಿಸಿದ್ದಾರೆ. 
SCROLL FOR NEXT