ದೇಶ

ವರುಣ್ ಗಾಂಧಿ, ದಯವಿಟ್ಟು 38,000 ರೂಪಾಯಿ ಫೋನ್ ಬಿಲ್ ಪಾವತಿಸಿ!

Srinivas Rao BV
ಫಿಲಿಬಿಟ್: ಸಾವಿರಾರು ಕೋಟಿ ರೂಪಾಯಿ ನಷ್ಟ ಎದುರಿಸುತ್ತಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಗೆ ಸಂಸದ ವರುಣ್ ಗಾಂಧಿ ಬರೊಬ್ಬರಿ 38,000 ರೂಪಾಯಿ ಫೋನ್ ಬಿಲ್ ನ್ನು ಬಾಕಿ ಉಳಿಸಿಕೊಂಡಿದ್ದಾರೆ. 
ಬಿಲ್ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಫಿಲಿಬಿಟ್ ಜಿಲ್ಲಾ ಚುನಾವಣಾ ಅಧಿಕಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಎಸ್ಎನ್ಎಲ್ ಪತ್ರ ಬರೆದಿದೆ. 
ಮಾ.30 ರಂದು ಪತ್ರ ಬರೆದಿರುವ ಬಿಎಸ್ಎನ್ಎಲ್, ಫಿಲಿಬಿಟ್ ಸಂಸದರಾಗಿದ್ದಾಗ ವರುಣ್ ಗಾಂಧಿ 2009-14 ರ ಅವಧಿಯಲ್ಲಿ ತಮ್ಮ ಕಚೇರಿಯ ಅಧಿಕೃತ ದೂರವಾಣಿಯ ಬಿಲ್ ಪಾವತಿ ಮಾಡಿಲ್ಲ. ಈ ಮೊತ್ತ ಬರೊಬ್ಬರಿ 38,616.00 ಯಷ್ಟಾಗಿದೆ. ಇದನ್ನು ಪಾವತಿ ಮಾಡುವಂತೆ ಹಲವು ಬಾರಿ ಕೇಳಲಾಗಿತ್ತಾದರೂ ಈ ವರೆಗೂ ಬಿಲ್ ಮೊತ್ತ ಬಂದಿಲ್ಲ ಎಂದು ಸಂಸ್ಥೆ ಹೇಳಿದೆ. 
ಲೋಕಸಭಾ ಕಾರ್ಯದರ್ಶಿಗಳ ಗಮನಕ್ಕೂ ಇದನ್ನು ತರಲಾಗಿತ್ತು. ಆದರೆ ಈ ಮೊತ್ತ ಬ್ರಾಡ್ ಬ್ಯಾಂಡ್ ಸೇವೆಗಳಿಗೆ ಸಂಬಂಧಿಸಿದ್ದಾಗಿರುವುದರಿಂದ ಸಂಸದರೇ ಅದನ್ನು ಪಾವತಿ ಮಾಡಬೇಕೆಂದು ಹೇಳಿದ್ದಾರೆ. 
ಈಗ ಫಿಲಿಬಿಟ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ವರುಣ್ ಗಾಂಧಿ, ಬಿಎಸ್ಎನ್ಎಲ್ ನಿಂದ ನಿರಾಕ್ಷೇಪಣಾ ಪತ್ರ ಪಡೆಯದೇ ನಾಮಪತ್ರ ಸಲ್ಲಿಸಿದ್ದಾರೆ. 
ನಿಯಮಗಳ ಪ್ರಕಾರ ಪ್ರತಿಯೊಬ್ಬ ಅಭ್ಯರ್ಥಿಯೂ ಸರ್ಕಾರಿ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರವನ್ನು ನಾಮಪತ್ರ ಸಲ್ಲಿಸಬೇಕಾದರೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. 
SCROLL FOR NEXT