ದೇಶ

ಸ್ಮೃತಿ ಇರಾನಿ ಆಪ್ತ, ಕೇಂದ್ರ ಸಚಿವೆಯನ್ನು ಅಮೇಥಿಗೆ ಕರೆತಂದಿದ್ದ ಮಾಜಿ ಸಚಿವ ಕಾಂಗ್ರೆಸ್ ಸೇರ್ಪಡೆ

Lingaraj Badiger
ಅಮೇಥಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಅತ್ಯಂತ ಆಪ್ತರಾಗಿದ್ದ ಹಾಗೂ ಅವರನ್ನು ಅಮೇಥಿಗೆ ಕರೆತಂದಿದ್ದ ಉತ್ತರ ಪ್ರದೇಶ ಮಾಜಿ ಸಚಿವ ರವಿ ದತ್ ಮಿಶ್ರಾ ಅವರು ಗುರುವಾರ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಕೇಸರಿ ಪಡೆಗೆ ಶಾಕ್ ನೀಡಿದ್ದಾರೆ.
ಇರಾನಿ ಅವರು ಪ್ರತಿ ಬಾರಿ ಅಮೇಥಿಗೆ ಭೇಟಿ ನೀಡಿದಾಗ ಮಿಶ್ರಾ ಅವರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಅಲ್ಲದೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು ಅಮೇಥಿಗೆ ಕರೆತಂದಿದ್ದೇ ಮಿಶ್ರಾ ಎನ್ನಲಾಗುತ್ತಿದೆ.
ಸಮಾಜವಾದಿ ಪಕ್ಷದ ಸರ್ಕಾರದಲ್ಲಿ ಸಚಿವರಾಗಿದ್ದ ಮಿಶ್ರಾ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಮೇಥಿ ಪ್ರವಾಸದಲ್ಲಿರುವಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಸ್ಮೃತಿ ಇರಾನಿ ಅವರು ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಮತ್ತೆ ಕಣಕ್ಕಿಳಿದಿದ್ದು, ಈ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದ ಬಿಜೆಪಿ ನಾಯಕಿಗೆ ಮಿಶ್ರಾ ದಿಢೀರ್ ಶಾಕ್ ನೀಡಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ, ರಾಹುಲ್ ಗಾಂಧಿ ವಿರುದ್ಧ ಸುಮಾರು 1 ಲಕ್ಷ ಮತಗಳ ಅಂತರದಿಂದ ಪರಾಜಿತಗೊಂಡಿದ್ದರು. ಆದರೆ ಉತ್ತರ ಪ್ರದೇಶದ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಸರ್ಕಾರ ರಚಿಸಿದೆ. ಇತ್ತ ಅಮೇಥಿ ಲೋಕಸಭಾ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಸ್ಮೃತಿ ಇರಾನಿ ಅವರು ಈ ಬಾರಿ ಗೆಲ್ಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 
SCROLL FOR NEXT