ದೇಶ

ಶಹನಾಯ್ ದಿಗ್ಗಜ ಬಿಸ್ಮಿಲ್ಲಾ ಖಾನ್ ಕುಟುಂಬದಿಂದ ಮೋದಿಗೆ ಬೆಂಬಲ, ನಾಮಪತ್ರ ಸಲ್ಲಿಕೆ ವೇಳೆ ಹಾಜರಿ!

Srinivasamurthy VN
ನವದೆಹಲಿ: ಖ್ಯಾತ ಶಹನಾಯ್ ವಿದ್ವಾಂಸ ಬಿಸ್ಮಿಲ್ಲಾ ಖಾನ್ ಕುಟುಂಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಘೋಷಣೆ ಮಾಡಿದ್ದು, ಅವಕಾಶ ಸಿಕ್ಕರೆ ಅವರು ನಾಮಪತ್ರ ಸಲ್ಲಿಸುವ ವೇಳೆ ಅವರೊಂದಿಗೆ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ನಾಸೀರ್ ಅಬ್ಬಾಸ್ ಬಿಸ್ಮಿಲ್ಲಾ ಅವರು, 'ಕಳೆದ ಲೋಕಸಭಾ ಚುನಾವಣೆ ವೇಳೆ ವಾರಣಾಸಿಯಿಂದ ಸ್ಪರ್ಧಿಸಲಿದ್ದ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿಯವರಿಗೆ ನಾಮಿನೇಶನ್ ವೇಳೆ ಪ್ರೊಪೋಸರ್​ ಆಗುವಂತೆ ನಮ್ಮನ್ನು  ಬಿಜೆಪಿ ಕೇಳಿಕೊಂಡಿತ್ತು. ಆದರೆ ನಾವು ಅಂದು ಒಪ್ಪಿರಲಿಲ್ಲ. ಆದರೆ ಈ ಬಾರಿ ನಾವು ಸ್ವಇಚ್ಛೆಯಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ವ್ಯಕ್ತಪಡಿಸುತ್ತೇವೆ. ಮಾತ್ರವಲ್ಲ ಅವರು ನಾಮಿನೇಶನ್ ಸಲ್ಲಿಸುವಾಗ ಅವಕಾಶ ಸಿಕ್ಕರೆ ಅವರೊಂದಿಗೆ ಹೆಜ್ಜೆ ಹಾಕುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ 'ಕಳೆದ ಬಾರಿ ಕಾಂಗ್ರೆಸ್ ನಾಯಕರು ಹೇಳಿದ್ದರಿಂದ ನಾವು ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ಸಿಗರು ಬಂದು ನಮ್ಮ ಹಿರಿಯರ ದಾರಿ ತಪ್ಪಿಸಿದ್ದರು. ಆದರೆ ಈ ಬಾರಿ ತಾವು ಪ್ರಧಾನಿ ಮೋದಿ ಅವರು ನಾಮಪತ್ರ ಸಲ್ಲಿಕೆ ಮಾಡುವಾಗ ಅವಕಾಶ ಸಿಕ್ಕರೆ ಅನುಮೋದಕರಾಗಿ ಅದಕ್ಕೆ ಸಹಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ತಾವು ಪ್ರಧಾನಿ ಮೋದಿಗೆ ಪತ್ರ ಬರೆದಿರುವುದಾಗಿ ಭಾರತ ರತ್ನ ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ನಾಸೀರ್ ಅಬ್ಬಾಸ್ ಬಿಸ್ಮಿಲ್ಲಾ ತಿಳಿಸಿದ್ದು, ಹಿಂದೆ ಕಾಂಗ್ರೆಸ್ಸಿನವರು ನಮ್ಮ ಕುಟುಂಬದ ಬ್ರೈನ್ ವಾಷ್ ಮಾಡಿದ್ದರು. ನಮ್ಮ ತಾತಾ ಬಿಸ್ಮಿಲ್ಲಾ ಖಾನ್ ಸಾಬ್ ಅವರು ಮೂಲತಃ ಕಾಂಗ್ರೆಸ್ಸಿನವರು. ಆದರೆ ನಮ್ಮ ತಾತನವರನ್ನು ಭಾರತ ರತ್ನ ಪ್ರಶಸ್ತಿಯಿಂದ ಪುರಸ್ಕರಿಸಿದ್ದು ಮಾತ್ರ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಎಂದು ನಾಸೀರ್ ಅಬ್ಬಾಸ್ ಬಿಸ್ಮಿಲ್ಲಾ ಇದೇ ವೇಳೆ ಹೇಳಿದ್ದಾರೆ.
ಇನ್ನು ಈ ಹಿಂದೆ ಡಾ.ರಾಜಕುಮಾರ್ ನಟನೆಯ ಸನಾದಿ ಅಪ್ಪಣ್ಣ ಚಿತ್ರದಲ್ಲಿ ಸನಾದಿ ನುಡಿಸಿದ್ದ ಬಿಸ್ಮಿಲ್ಲಾ ಖಾನ್, ಕನ್ನಡಿಗರ ಮನವನ್ನೂ ಗೆದ್ದಿದ್ದರು.
SCROLL FOR NEXT