ದೇಶ

ವಾರಣಾಸಿಯಿಂದ ಸ್ಪರ್ಧಿಸದಿರುವುದು ಪ್ರಿಯಾಂಕಾ ಗಾಂಧಿಯ ಸ್ವಂತ ನಿರ್ಧಾರ: ಸ್ಯಾಮ್ ಪಿತ್ರೋಡಾ

Lingaraj Badiger
ಜೈಪುರ್: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸದಿರುವುದು ಪ್ರಿಯಾಂಕಾ ಗಾಂಧಿ ಅವರ ಸ್ವಂತ ನಿರ್ಧಾರ. ಅದು ಪಕ್ಷದ ನಿರ್ಧಾರ ಅಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಸ್ಪಷ್ಟಪಡಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು, ವಾರಣಾಸಿಯಲ್ಲಿ ಸ್ಪರ್ಧಿಸಬಾರದು ಎಂಬುದು ಪ್ರಿಯಾಂಕಾ ಗಾಂಧಿ ಅವರೇ ತೆಗೆದುಕೊಂಡ ನಿರ್ಧಾರ. ಏಕೆಂದರೆ ಅವರ ಜವಾಬ್ದಾರಿಯೇ ಬೇರೆ. ಒಂದು ಕಡೆ ಸ್ಪರ್ಧೆಗೆ ನಿಂತರೆ ಬೇರೆ ಕಡೆ ಗಮನ ನೀಡುವುದಕ್ಕೆ ಸಾಧ್ಯವಾಗುದಿಲ್ಲ. ಒಂದೇ ಒಂದು ಕ್ಷೇತ್ರದ ಬಗ್ಗೆ ಗಮನ ಹರಿಸುವುದಕ್ಕಿಂತ ಎಲ್ಲಾ ಕ್ಷೇತ್ರಗಳ ಬಗ್ಗೆಯೂ ಗಮನ ನೀಡಿ, ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕು ಎಂಬುದು ಪ್ರಿಯಾಂಕಾ ಗಾಂಧಿ ಅವರ ಅಭಿಪ್ರಾಯ ಎಂದಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿ ನೀಡಿದೆ. ಆದ್ದರಿಂದ ಆ ಜವಾಬ್ದಾರಿಯನ್ನು ನಿಭಾಯಿಸುವ ಬಗ್ಗೆ ಅವರು ಹೆಚ್ಚಿನ ಮಹತ್ವ ನೀಡಲಿದ್ದಾರೆ. ವಾರಣಾಸಿಯಿಂದ ಸ್ಪರ್ಧಿಸದಿರುವುದು ಅವರ ಸ್ವಂತ ನಿರ್ಧಾರ ಎಂದು ಪಿತ್ರೋಡಾ ಹೇಳಿದ್ದಾರೆ.
ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೆ ಸ್ವತಃ ಅವರ ಪತಿ ರಾಬರ್ಟ್ ವಾದ್ರಾ ಅವರು ಸಹ ಪ್ರಿಯಾಂಕಾ ಪ್ರಧಾನಿ ವಿರುದ್ಧ ಸ್ಪರ್ಧಿಸಲು ಸಿದ್ಧರಿದ್ದಾರೆ. ಆದರೆ ಈ ಬಗ್ಗೆ ಪಕ್ಷದ ನಿರ್ಧಾರ ಅಂತಿಮ ಎಂದಿದ್ದರು. ಈಗ ಆ ಎಲ್ಲಾ ಅನುಮಾನಗಳಿಗೂ ತೆರೆ ಬಿದ್ದಿದ್ದು, ಅಜಯ್ ರಾಯ್ ಗೆ ಟಿಕೆಟ್ ನೀಡಲಾಗಿದೆ.
SCROLL FOR NEXT