ದೇಶ

ನನ್ನನ್ನೂ ಜಾತಿ ರಾಜಕಾರಣಕ್ಕೆ ಎಳೆಯಬೇಡಿ; ಮಾಯಾವತಿ ವಿರುದ್ಧ ಪ್ರಧಾನಿ ಮೋದಿ ಕಿಡಿ

Srinivasamurthy VN
ಲಖನೌ: ನನ್ನನ್ನೂ ಕೂಡ ನಿಮ್ಮ ಜಾತಿ ರಾಜಕಾರಣಕ್ಕೆ ಎಳೆಯಬೇಡಿ ಎಂದು ಪ್ರಧಾನಿ ಮೋದಿ ಬಿಎಸ್ ಪಿ ಅಧಿನಾಯಕಿ ಮಾಯಾವತಿ ಅವರಿಗೆ ತಿರುಗೇಟು ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದ್ದ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, ಚುನಾವಣಾ ಲಾಭ ಪಡೆಯಲು ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಜಾತಿಯನ್ನು ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸುವ ಮೂಲಕ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಈ ಹೇಳಿಕೆಗೆ ಇಂದು ಉತ್ತರ ಪ್ರದೇಶದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿ ತಿರುಗೇಟು ನೀಡಿದ ಪ್ರಧಾನಿ ಮೋದಿ, 'ಎಸ್‌ಪಿ ಮತ್ತು ಬಿಎಸ್ಪಿ ಪಕ್ಷಗಳು ಜಾತಿ ರಾಜಕಾರಣ ಮಾಡುತ್ತಿವೆ. ಅಧಿಕಾರಕ್ಕೆ ಬಂದರೆ ಜನರ ಸಂಪತ್ತು ಕೊಳ್ಳೆ ಹೊಡೆಯಲಿವೆ. ಅಂತೆಯೇ ನಿಮ್ಮ ಜಾತಿ ರಾಜಕಾರಣಕ್ಕೆ ನನ್ನನ್ನೂ ಕೂಡ ಎಳೆದು ತರಬೇಡಿ ಎಂದು ಹೇಳಿದ್ದಾರೆ.
'ಮಾಯಾವತಿ ಜೀ, ನಾನು ತೀರಾ ಹಿಂದುಳಿದವ. ನನ್ನನ್ನು ಜಾತಿ ರಾಜಕಾರಣಕ್ಕೆ ಎಳೆದು ತರಬೇಡಿ. ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ನೀವು ನನ್ನ ಜಾತಿಯ ವಿಚಾರ ಮಾತನಾಡುವವರೆಗೂ, ದೇಶದ ಜನರಿಗೆ ನನ್ನ ಜಾತಿಯ ಬಗ್ಗೆ ಗೊತ್ತಿರಲಿಲ್ಲ. ಇದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.
ಅಂತೆಯೇ ಎಸ್ ಪಿ-ಬಿಎಸ್ ಪಿ ಪಕ್ಷಗಳ ಮೈತ್ರಿಯನ್ನು ಅವಕಾಶವಾದಿಗಳ ಮಹಾಕಲಬೆರಕೆ ಎಂದು ಟೀಕಿಸಿದ ಪ್ರಧಾನಿ ಮೋದಿ, ಸಮಾಜವಾದಿ ಪಕ್ಷವು ಅಂಬೇಡ್ಕರ್‌ ವಿಚಾರಗಳ ವಿರೋಧಿ. ಆದರೆ ತಮ್ಮನ್ನು ತಾವು ದಲಿತರು ಎಂದು ಕರೆದುಕೊಳ್ಳುವ ಮಾಯಾವತಿ ಅವರು ಸಮಾಜವಾದಿಗಳ ಜತೆ ಕೈ ಜೋಡಿಸಿದ್ದಾರೆ. ಇವರ ಬಾಯಲ್ಲಿ ಬರೀ ಜಾತಿಯ ಮಂತ್ರ, ಮನಸಲ್ಲಿ ಹಣದ ಜಪ. ಕೆಲವರು ಅಂಬೇಡ್ಕರ್ ಹೆಸರಿನಲ್ಲಿ ಮತ ಕೇಳುತ್ತಾರೆ. ಆದರೆ ಅಂಬೇಡ್ಕರ್ ಅವರಿಂದ ಅವರು ಏನನ್ನೂ ಕಲಿತಿಲ್ಲ. ಅಧಿಕಾರ ಹಿಡಿಯುವುದೇ ಗುರಿಯಾದಾಗ ಮತ್ತು ದೇಶಕ್ಕಿಂತ ಜಾತಿ ರಾಜಕಾರಣವೇ ಮುಖ್ಯವಾದಾಗ ಹೀಗಾಗುತ್ತದೆ. ಈ ಅವಕಾಶವಾದಿ ದುರ್ಬಲರು ಸೇರಿ ಮಾಡುವ ಸರ್ಕಾರವೂ ದುರ್ಬಲವಾಗಿಯೇ ಇರಲಿದೆ ಎಂದು ಮೋದಿ ಹೇಳಿದರು.
SCROLL FOR NEXT