ದೇಶ

ಕುದುರೆ ವ್ಯಾಪಾರದ ಮಾತು: ಪ್ರಧಾನಿ ಮೋದಿ ನಾಮಪತ್ರ ರದ್ಧುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಟಿಎಂಸಿ ಆಗ್ರಹ

Lingaraj Badiger
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 40 ಟಿಎಂಸಿ ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದು, ಇದು ಪ್ರಧಾನಿ ಶಾಸಕರ ಕುದುರೆ ವ್ಯಾಪರಕ್ಕೆ ಮುಂದಾಗಿರುವುದನ್ನು ಸೂಚಿಸುತ್ತದೆ. ಇಂತಹ ಪ್ರಚೋದನಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡಿದ ಪ್ರಧಾನಿ ಮೋದಿ ಅವರ ನಾಮಪತ್ರವನ್ನು ರದ್ದುಗೊಳಿಸಬೇಕು ಎಂದು ಟಿಎಂಸಿ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.
ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಟಿಎಂಸಿ, ಆಧಾರರಹಿತ, ಸೂಕ್ತವಲ್ಲದ ಮತ್ತು ಅಕ್ರಮ ಪ್ರಚಾರದಲ್ಲಿ ತೊಡಗಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದೆ.
ಸೋಮವಾರ ಕೋಲ್ಕತ್ತಾದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಟಿಎಂಸಿ 40 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಅವರೆಲ್ಲರೂ ಬಿಜೆಪಿ ಸೇರಲಿದ್ದಾರೆ ಎಂದು ಮಮತಾ ಬ್ಯಾನರ್ಜಿಗೆ ಎಚ್ಚರಿಕೆ ನೀಡಿದ್ದರು. ಪ್ರಧಾನಿ ಅವರ ಈ ಹೇಳಿಕೆಗೆ ವಿಪಕ್ಷಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದವು.
ಪ್ರಧಾನಿ ಹೇಳಿಕೆಗೆ ಟ್ವೀಟ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಅಖಿಲೇಶ್​, ಪ್ರಧಾನಿ 125 ಕೋಟಿ ಭಾರತೀಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 40 ಶಾಸಕರನ್ನು ಪಕ್ಷಾಂತರ ಮಾಡುವ ಹೇಳಿಕೆ ಮೂಲಕ ಮೋದಿ ಭರವಸೆಗಳು ಕುಸಿಯುತ್ತಿವೆ. ಇದು ಕಪ್ಪು ಹಣದ ಮನಸ್ಥಿತಿಯ ವ್ಯಕ್ತಿಗಳ ಮಾತು ಎಂದಿದ್ದಾರೆ.
SCROLL FOR NEXT