ದೇಶ

ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯಿಂದಲೂ ಆಡ್ವಾಣಿ, ಎಂಎಂ ಜೋಶಿ, ಮನೇಕಾಗೆ ಕೊಕ್!

Srinivasamurthy VN
ಲಖನೌ: ಬಿಜೆಪಿಯ ಹಿರಿಯ ನಾಯಕರನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದ ಬಿಜೆಪಿ ಕಡೆಗಣಿಸುತ್ತಿದೆ ಎಂಬ ಆರೋಪಗಳ ನಡುವೆಯೇ ಟಿಕೆಟ್ ನಿರಾಕರಣೆ ಬಳಿಕ ಇದೀಗ ಬಿಜೆಪಿ ಹಿರಿಯರಿಗೆ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಿಂದಲೂ ಕೊಕ್ ನೀಡಲಾಗಿದೆ.
ಹೌದು.. ಟಿಕೆಟ್ ನಿರಾಕರಣೆಯ ನಂತರ ಬಿಜೆಪಿ ತನ್ನ ತಾರಾ ಪ್ರಚಾರಕ ಪಟ್ಟಿಯಿಂದಲೂ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮನೇಕಾ ಗಾಂಧಿ ಮತ್ತು ಮುರಳಿ  ಮನೋಹರ ಜೋಶಿ ಅವರ ಹೆಸರುಗಳನ್ನು ಕೈ ಬಿಟ್ಟಿದೆ. ಉತ್ತರ ಪ್ರದೇಶದ ಲೋಕಸಭೆ ಚುನಾವಣೆಗೆ ಸ್ಟಾರ್ ಪ್ರಚಾರಕರಾಗಿ 40 ನಾಯಕರ ಹೆಸರನ್ನು ಪಕ್ಷ ಬಿಡುಗಡೆ ಮಾಡಿದೆ. ಆದರೆ ಪಟ್ಟಿಯಲ್ಲಿ ಎಲ್ ಕೆ ಆಡ್ವಾಣಿ, ಡಾ. ಮುರಳಿ ಮನೋಹರ್ ಜೋಶಿ, ಕೇಂದ್ರ ಸಚಿವ ಮೇನಕಾ ಗಾಂಧಿ ಮತ್ತು ಅವರ ಪುತ್ರ ವರುಣ್ ಗಾಂಧಿ ಅವರ ಹೆಸರುಗಳೂ ಕಾಣೆಯಾಗಿವೆ.
ಇನ್ನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಆಡ್ವಾಣಿಯ ಹೇಳಿಕೆ ನಂತರ ಈಗ  ಮತ್ತೊಬ್ಬ ಹಿರಿಯ  ಮುಖಂಡ ಡಾ. ಮುರಳಿ ಮನೋಹರ್ ಜೋಶಿ ಕೂಡ ಅದೇ ರಾಗ ಹಾಡಿದ್ದಾರೆ.   ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಘೋಷಿಸುವಂತೆ ಪಕ್ಷ ತಮಗೆ ತಿಳಿಸಿದ್ದು ಅದರಂತೆ ಚುನಾವಣಾ ಕಣದಿಂದ ದೂರ ಉಳಿಯುವುದಾಗಿ ಜೋಶಿ ಹೇಳಿಕೆಯಲ್ಲಿ  ತಿಳಿಸಿದ್ದಾರೆ.
'ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸುಂತೆ  ಪ್ರಧಾನ ಕಾರ್ಯದರ್ಶಿ (ಸಂಘಟನೆ) ರಾಮ್ ಲಾಲ್ ಅವರು  ಕೇಳಿದ್ದು, ಪಕ್ಷದ ಆದೇಶವನ್ನು ಪಾಲನೆ ಮಾಡಿರುವುದಾಗಿ ಹೇಳಿದ್ದಾರೆ.  ಕಾನ್ಪುರದ ಮತದಾರರಿಗಾಗಿ ಈ ಹೇಳಿಕೆ ಬಿಡುಗಡೆಯಾಗಿದ್ದು, 2014ಲೋಕಸಭಾ ಚುನಾವಣೆಯಲ್ಲಿ  ಡಾ. ಜೋಶಿ ಶೇಕಡಾ 57 ರಷ್ಟು ಮತ ಪಡೆದಿದ್ದರು. ಇದಕ್ಕೂ ಮುನ್ನ ಪಕ್ಷದ ಹಿರಿಯ ನಾಯಕ ಕಲ್ರಾಜ್ ಮಿಶ್ರಾ  ಡಿಯೋರಿಯಾ ಕ್ಷೇತ್ರದಿಂದ   ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಡಾ. ಮುರಳಿ ಮನೋಹರ್ ಜೋಶಿಗೆ ಟಿಕೆಟ್ ನಿರಾಕರಿಸುವ ಪಕ್ಷದ ನಿರ್ಧಾರವನ್ನು ಸಮರ್ಥಿಸಿರುವ ಉತ್ತರ ಪ್ರದೇಶ ಸಚಿವ ಸಿದ್ದಾರ್ಥ್ ನಾಥ್ ಸಿಂಗ್,  ಜೋಶಿ ಅವರು ಪಕ್ಷದ ಸಂಸ್ಥಾಪಕ  ಸದಸ್ಯರಾಗಿದ್ದಾರೆ ಮತ್ತು ಪಕ್ಷ ಅವರನ್ನು ಮಾರ್ಗದರ್ಶಕ  ಮಂಡಲದ ತಂಡದ ಗೌರವ ಸ್ಥಾನದಲ್ಲಿ ಕೂರಿಸಿದೆ.  ಹೀಗಾಗಿ  ಅವರನ್ನು ಕಡಗಣಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು. 
SCROLL FOR NEXT