ದೇಶ

ನಮ್ಮ ಬಳಿ ಪ್ರಧಾನಿ ಮೋದಿ ಇದ್ದಾರೆ, ನಿಮ್ಮ ನಾಯಕ ಯಾರು? ಪ್ರತಿಪಕ್ಷಗಳ ವಿರುದ್ಧ ಏಕಾಏಕಿ ಸಿಡಿದ ಉದ್ಧವ್ ಠಾಕ್ರೆ!

Srinivas Rao BV
ಗಾಂಧಿನಗರ: ಈ ವರೆಗೂ ಪ್ರಧಾನಿ ನರೇಂದ್ರ ಮೋದಿಯನ್ನು ಹಿಗ್ಗಾ-ಮುಗ್ಗಾ ಟೀಕಿಸುತ್ತಿದ್ದ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಈಗ ಬಿಜೆಪಿ-ಶಿವಸೇನೆ ಮೈತ್ರಿ ನಂತರ ಏಕಾಏಕಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಲು ಪ್ರಾರಂಭಿಸಿದ್ದಾರೆ. 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗಾಂಧಿ ನಗರದಿಂದ ನಾಮಪತ್ರ ಸಲ್ಲಿಸುವ ವೇಳೆ ಸಾಥ್ ನೀಡಿದ್ದ ಉದ್ಧವ್ ಠಾಕ್ರೆ, ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದು, ವಿಪಕ್ಷಗಳನ್ನು ನಾಯಕನೇ ಇಲ್ಲದ ಗುಂಪು ಎಂದು ಟೀಕಿಸಿದ್ದಾರೆ. 
ಬಿಜೆಪಿ-ಶಿವಸೇನೆ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಆದರೆ ಅದನ್ನು ಮೀರಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಎಲ್ಲಾ ವಿವಾದಗಳಿಗೂ ತೆರೆ ಬಿದ್ದಿದೆ. ಹಿಂದುತ್ವ ಹಾಗೂ ರಾಷ್ಟ್ರೀಯತೆ ಎರಡೂ ಪಕ್ಷಗಳ ಸೈದ್ಧಾಂತಿಕ ಬುನಾದಿ, ನನ್ನ ತಂದೆ ಬಾಳಾಸಾಹೇಬ್ ಠಾಕ್ರೆ ಹಿಂದುತ್ವವೇ ನಮ್ಮ ಉಸಿರು ಅದಿಲ್ಲದೇ ನಾವು ಬದುಕುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. 
ಬಿಜೆಪಿ-ಶಿವಸೇನೆ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಹಲವು ಪಕ್ಷಗಳು ಅದನ್ನು ಆನಂದಿಸಿದ್ದವು. ಆದರೆ ಎರಡೂ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯ ಈಗ ಹಳೆಯ ಅಧ್ಯಾಯ ಎಂದು ಠಾಕ್ರೆ ಹೇಳಿದ್ದಾರೆ. 
ಇದೇ ವೇಳೆ ಮಹಾಘಟಬಂಧನ್ನು ಅವಕಾಶವಾದದಿಂದ ಸೃಷ್ಟಿಯಾಗಿರುವ ಮೈತ್ರಿ ಎಂದು ವಾಗ್ದಾಳಿ ನಡೆಸಿರುವ ಠಾಕ್ರೆ 56 ಪಕ್ಷಗಳು ಸೇರಿ ಒಟ್ಟಾಗಿ ಮೈತ್ರಿ ಮಾಡಿಕೊಂಡಿವೆ, ಆದರೆ ಅವರ ಮನಸ್ಸು ಮಾತ್ರ ಒಂದಾಗಿಲ್ಲ. ನಮ್ಮ ಬಳಿ ಮೋದಿ ನಾಯಕತ್ವ ಇದೆ, ನಿಮ್ಮ ಬಳಿ ಯಾರ ನಾಯಕತ್ವವಿದೆ. ನಿಮ್ಮ ಪ್ರಧಾನಿ ಯಾರಾಗಲಿದ್ದಾರೆ, ನಿಮ್ಮಲ್ಲಿ ಪ್ರತಿಯೊಬ್ಬರೂ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳೇ ಎಂದು ಠಾಕ್ರೆ ವಿಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. 
SCROLL FOR NEXT