ದೇಶ

8.76 ಕೋಟಿ ಮತದಾರರಿಂದ 674 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Srinivasamurthy VN
ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು 5ನೇ ಹಂತದ ಮತದಾನ ನಡೆಯುತ್ತಿದ್ದು, ದೇಶದ ಒಟ್ಟು 7 ರಾಜ್ಯಗಳ 51 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.
7 ರಾಜ್ಯಗಳ 51 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನದಲ್ಲಿ ಸುಮಾರು 8.76 ಕೋಟಿ ಜನ ತಮ್ಮ ಮತದಾನ ಹಕ್ಕು ಚಲಾವಣೆ ಮಾಡಲಿದ್ದು, 674 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಾಡಲಿದ್ದಾರೆ.  ಉತ್ತರಪ್ರದೇಶದ 14 ಕ್ಷೇತ್ರ, ರಾಜಸ್ಥಾನದ 12, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಲ್ಲಿ ತಲಾ 7 ಕ್ಷೇತ್ರ, ಬಿಹಾರದಲ್ಲಿನ 5, ಜಾರ್ಖಂಡ್​​ ನ 4, ಜಮ್ಮು ಮತ್ತು ಕಾಶ್ಮೀರದ 2  (ಅನಂತ್ ನಾಗ್ ಹಾಗೂ ಲಡಾಖ್) ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. 
ಇಂದಿನ ಮತದಾನ ಪ್ರಕ್ರಿಯೆಯಲ್ಲಿ ಘಟಾನುಘಟಿ ನಾಯಕರು ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದು, ಕಾಂಗ್ರೆಸ್ ಪಾಲಿನ ಪ್ರತಿಷ್ಠೆ ಕಣವೆಂದೇ ಹೇಳಲಾಗುತ್ತಿರುವ ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್​​ ಗಾಂಧಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಅಲ್ಲದೇ ರಾಯ್ ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಸ್ಪರ್ಧಿಸಿದ್ದು, ಇಲ್ಲಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಮತ್ತಿತರರು ಸೋನಿಯಾ ವಿರುದ್ಧ ಸ್ಪರ್ಧಿಸಿದ್ದಾರೆ. 
ಇಂದಿನ ಮತದಾನಕ್ಕಾಗಿ ಒಟ್ಟು ದೇಶದ 7 ರಾಜ್ಯಗಳಲ್ಲಿ 96 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮುಕ್ತ ಮತ್ತು ನ್ಯಾಯಯುತ ಚುನಾವಣೆಗಾಗಿ ಬಿಗಿ ಪೊಲೀಸ್​​ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಏಪ್ರಿಲ್ 1ರಿಂದ ಏಪ್ರಿಲ್ 29ರ ವರೆಗೆ ನಡೆದ ಮೊದಲ ನಾಲ್ಕು ಹಂತಗಳ ಚುನಾವಣೆಗಳಲ್ಲಿ ಶೇ.70ರಷ್ಟು ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿದೆ. ಇಂದು ಐದನೇ ಹಂತದ ಮತದಾನ ನಡೆಯುತ್ತಿದ್ದು, ಮೇ 12 ರಂದು 6ನೇ ಹಂತ ಹಾಗೂ ಮೇ 19 ರಂದು 7ನೇ ಹಂತದ ಮತದಾನ ನಡೆಯಲಿದೆ. ಮೇ 23 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
SCROLL FOR NEXT