ದೇಶ

ಲೋಕ ಸಮರ: 5ನೇ ಹಂತದ ಮತದಾನದಲ್ಲಿ ಘಟಾನುಘಟಿ ನಾಯಕರ ಹಣೆಬರಹ ನಿರ್ಧಾರ!

Srinivasamurthy VN
ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು 5ನೇ ಹಂತದ ಮತದಾನ ನಡೆಯುತ್ತಿದ್ದು, ದೇಶದ ಒಟ್ಟು 7 ರಾಜ್ಯಗಳ 51 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.
ಬಿಹಾರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 5ನೇ ಹಂತದಲ್ಲಿ ನಡೆಯುತ್ತಿದ್ದು, 5ನೇ ಹಂತದಲ್ಲಿ ಘಟಾನುಘಟಿ ನಾಯಕರು ಕಣದಲ್ಲಿದ್ದಾರೆ. ಹೀಗಾಗಿ ಇಂದಿನ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದ ಮತದಾನವಾಗುವ ಸಾಧ್ಯತೆ ಇದೆ.
ಉತ್ತರಪ್ರದೇಶದ 14 ಕ್ಷೇತ್ರ, ರಾಜಸ್ಥಾನದ 12, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಲ್ಲಿ ತಲಾ 7 ಕ್ಷೇತ್ರ, ಬಿಹಾರದಲ್ಲಿನ 5, ಜಾರ್ಖಂಡ್​​ ನ 4, ಜಮ್ಮು ಮತ್ತು ಕಾಶ್ಮೀರದ 2  (ಅನಂತ್ ನಾಗ್ ಹಾಗೂ ಲಡಾಖ್) ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. 
ಕಣದಲ್ಲಿ ಘಟಾನುಘಟಿ ನಾಯಕರು
ಇನ್ನು ಇಂದಿನ ಮತದಾನ ಪ್ರಕ್ರಿಯೆಯಲ್ಲಿ ಘಟಾನುಘಟಿ ನಾಯಕರು ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದು, ಕಾಂಗ್ರೆಸ್ ಪಾಲಿನ ಪ್ರತಿಷ್ಠೆ ಕಣವೆಂದೇ ಹೇಳಲಾಗುತ್ತಿರುವ ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್​​ ಗಾಂಧಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಅಲ್ಲದೇ ರಾಯ್ ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಸ್ಪರ್ಧಿಸಿದ್ದು, ಇಲ್ಲಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಮತ್ತಿತರರು ಸೋನಿಯಾ ವಿರುದ್ಧ ಸ್ಪರ್ಧಿಸಿದ್ದಾರೆ. 
ಇನ್ನು ಬಿಜೆಪಿಯ ರಾಜನಾಥ್ ಸಿಂಗ್ ಉತ್ತರ ಪ್ರದೇಶದ ಲಖನೌ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಇದೇ ಕ್ಷೇತ್ರದಿಂದ ಶತೃಘ್ನ ಸಿನ್ಹಾ ಅವರ ಪತ್ನಿ ಪೂನಂ ಸಿನ್ಹಾ ಅವರು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಇನ್ನು ಕೇಂದ್ರ ಸಚಿವರಾದ ರಾಜ್ಯ ವರ್ಧನ್ ಸಿಂಗ್ ರಾಥೋಡ್ ಅವರು ಜೈಪುರ ಗ್ರಾಮಾಂತರ ಸ್ಪರ್ಧಿಸಿದ್ದು, ಇದೇ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಖ್ಯಾತ ಅಥ್ಲೀಟ್ ಕೃಷ್ಣಾ ಪುನಿಯಾ ಅವರು ಸ್ಪರ್ಧಿಸಿದ್ದಾರೆ. ಅರ್ಜುನ್ ರಾಮ್ ಮೇಘ್ವಾಲ್ (ಬಿಕನೇರ್), ಮತ್ತು ಜಯಂತ್ ಸಿನ್ಹಾ (ಜಾರ್ಖಂಡ್ ನ ಹಜಾರಿಬಾಗ್ ಕ್ಷೇತ್ರದಿಂದ) ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅಂತೆಯೇ ಅನಂತ್ ನಾಗ್ ಕ್ಷೇತ್ರದಿಂದ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಸ್ಪರ್ಧಿಸುತ್ತಿದ್ದಾರೆ.
SCROLL FOR NEXT