ಕೊಲ್ಕತ್ತಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆಯಲ್ಲಿ ಬಿಜೆಪಿ ಹಾಗೂ ಎಡ ಪಕ್ಷಗಳ ವಿದ್ಯಾರ್ಥಿ ಹೋರಾಟಗಾರರ ನಡುವೆ ಘರ್ಷಣೆ ಉಂಟಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದಾಗ ಹಲವರು ಗಾಯಗೊಂಡಿದ್ದಾರೆ.
ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಮುಂದೆ ಈ ಘಟನೆ ಜರುಗಿದೆ.ಕಲ್ಕತ್ತಾ ವಿಶ್ವವಿದ್ಯಾನಿಲದ ಕಾಲೇಜ್ ಸ್ಟ್ರೀಟ್ ನಿಂದ ಅಮಿತ್ ಶಾ ರೋಡ್ ಶೋ ಸಾಗುತ್ತಿದ್ದಂತೆ ಉಭಯ ಪಕ್ಷಗಳ ಹೋರಾಟಗಾರರ ನಡುವೆ ಮಾತಿನ ಚಕಮಕಿ ಉಂಟಾಗಿ ನೂಕಾಟ, ತಳ್ಳಾಟ ನಡೆದಿದೆ.
ಎಡವಿದ್ಯಾರ್ಥಿಗಳ ಕಪ್ಪು ಬಾವುಟ ಪ್ರದರ್ಶಸಿ ಅಮಿತ್ ಷಾಗೋ ಬ್ಯಾಕ್ ಎಂಬ ಘೋಷಣೆ ಕೂಗಿದರು. ವಿಶ್ವವಿದ್ಯಾನಿಲಯದ ಹೊರಗಿದ್ದ ಎಬಿವಿಪಿ ಬೆಂಬಲಿಗರು ಈ ಸಮಯದಲ್ಲಿ ಜೈಶ್ರೀರಾಮ್ ಎಂಬ ಘೋಷಣೆ ಮೊಳಗಿಸಿದರು. ಈ ಸಂದರ್ಭದಲ್ಲಿ ಉಭಯ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಲ್ಲು ತೂರಾಟ ನಡೆಲಾಗಿದೆ.
ಉದ್ರಿಕ್ತ ಗುಂಪು ವಿವೇಕಾನಂದ ಕಾಲೇಜ್ ಬಳಿ ಸ್ಥಾಪಿಸಲಾಗಿದ್ದ 19 ನೇ ಶತಮಾನದ ಸಮಾಜ ಸುಧಾರಕ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ಪೊಲೀಸರು ಬ್ಯಾರಿಕೇಡ್ ಹಾಕಿ ತಹಬಂದಿಗೆ ತರಲು ಪ್ರಯತ್ನ ಮಾಡಿದರೂ ಅಮಿತ್ ಷಾ ರೋಡ್ ಶೋ ರಸ್ತೆಯಲ್ಲಿ ಹಾದು ಹೋಗುವ ಸಮಯದಲ್ಲಿ ಬಿಜೆಪಿ ಬೆಂಬಲಿಗರು ಬ್ಯಾರಿಕೇಡ್ ಮುರಿದು ಎಡಪಕ್ಷಗಳ ವಿದ್ಯಾರ್ಥಿಗಳನ್ನು ಅಟ್ಟಿಸಿಕೊಂಡು ಹೊರಟಾಗ ಪೊಲೀಸರು ವಿಶ್ವವಿದ್ಯಾನಿಲಯದ ದ್ವಾರವನ್ನು ಮುಚ್ಚಿ ಲಘು ಲಾಠಿ ಪ್ರಹಾರ ಮಾಡಿದರು.ಈ ಘಟನೆಯಲ್ಲಿ ಎರಡೂ ಕಡೆಯ ಹಲವರು ಗಾಯಗೊಂಡಿದ್ದಾರೆ