ದೇಶ

ಅಂತಿಮ ಹಂತದ ಮತದಾನ: ಪ್ರಧಾನಿ ಮೋದಿ ಸೇರಿ ಘಟಾನುಘಟಿಗಳ ಭವಿಷ್ಯ ನಿರ್ಧಾರ

Srinivasamurthy VN

ನವದೆಹಲಿ: ಲೋಕಸಭಾ ಚುನಾವಣೆ 2019ರ 7ನೇ ಮತ್ತು ಅಂತಿಮ ಹಂತದ ಮತದಾನ ಭಾನುವಾರ ನಡೆಯಲಿದ್ದು, ಪ್ರಧಾನಿ ಮೋದಿ ಸೇರಿ ಘಟಾನುಘಟಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ,

ನಾಳೆ ನಡೆಯಲಿರುವ 7ನೇ ಹಾಗೂ ಅಂತಿಮ ಹಂತದ ಮತದಾನದಲ್ಲಿ ಒಟ್ಟು 8 ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಉತ್ತರ ಪ್ರದೇಶ ಮತ್ತು ಪಂಜಾಬ್ ನ ತಲಾ 13 ಕ್ಷೇತ್ರಗಳು, ಪಶ್ಚಿಮ ಬಂಗಾಳದ 9,  ಬಿಹಾರ ಮತ್ತು ಮದ್ಯ ಪ್ರದೇಶದ ತಲಾ  ಕ್ಷೇತ್ರಗಳು, ಹಿಮಾಚಲ ಪ್ರದೇಶದ ನಾಲ್ಕು, ಜಾರ್ಖಂಡ್ ನ ಮೂರು ಮತ್ತ ಕೇಂದ್ರಾಡಳಿತ ಪ್ರದೇಶ ಚಂಡೀಘಡದ ಒಂದು ಕ್ಷೇತ್ರ ಸೇರಿದಂತೆ ಒಟ್ಟು 59 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಪ್ರಮುಖವಾಗಿ ವಾರಣಾಸಿ ಕ್ಷೇತ್ರದಿಂದ 2ನೇ ಬಾರಿಗೆ ಕಣಕ್ಕಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 918 ಅಭ್ಯರ್ಥಿಗಳ ಭವಿಷ್ಯ ವನ್ನು ಒಟ್ಟು 10.01 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ. 
ಇನ್ನು ವಾರಣಾಸಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಜಯ್ ರಾಯ್ ಅವರು ಸ್ಪರ್ಧೆ ಮಾಡಿದ್ದು, ಕಳೆದ ಬಾರಿಯೂ ಇದೇ ಅಜಯ್ ರಾಯ್ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಇದೇ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಶಾಲಿನಿ ಯಾದವ್ ಅವರು ಸ್ಪರ್ಧೆ ಮಾಡಿದ್ದಾರೆ. ಇತ್ತ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಬಿಜೆಪಿಯ ಮಾಜಿ ರೆಬೆಲ್ ನಾಯಕ ಶೃತೃಘ್ನ ಸಿನ್ಹಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬಿಜೆಪಿಯಿಂದ ರವಿಶಂಕರ್ ಪ್ರಸಾದ್ ಅವರು ಕಣಕ್ಕಿಳಿದಿದ್ದಾರೆ. 
ಉತ್ತರ ಪ್ರದೇಶದ ಹೈವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿತವಾಗಿರುವ ಗೋರಕ್ ಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಖ್ಯಾತ ಭೋಜ್ ಪುರಿ ನಟ ರವಿ ಕಿಶನ್ ಅವರು ಸ್ಪರ್ಧೆ ಮಾಡಿದ್ದು, ಕಾಂಗ್ರೆಸ್ ನಿಂದ ಮಧುಸೂದನ್ ತ್ರಿಪಾಠಿ ಸ್ಪರ್ಧಿಸಿದ್ದಾರೆ. ಎಸ್ ಪಿಯಿಂದ ರಾಮ್ ಭೂಸಲ್ ನಿಶಾದ್ ಅವರು ಸ್ಪರ್ಧೆ ಮಾಡಿದ್ದಾರೆ. 
ಇನ್ನು ಪಂಜಾಬ್ ನ ಮಿಲಿಯನ್ ಡಾಲರ್ ಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಅಮೃತಸರದಿಂದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸ್ಪರ್ಧೆ ಮಾಡಿದ್ದು, ಅವರಿಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಗುರ್ಜೀತ್ ಸಿಂಗ್ ಔಜಿಲಾ ಸ್ಪರ್ಧೆ ಮಾಡಿದ್ದಾರೆ. ಇನ್ನು ಇದೇ ಪಂಜಾಬ್ ಮತ್ತೊಂದು ಹೈವೋಲ್ಟೇಜ್ ಕ್ಷೇತ್ರ ಗುರುದಾಸ್ ಪುರದಿಂದ ಖ್ಯಾತ ಬಾಲಿವುಡ್ ನಟ ಹಾಗೂ ನಟ ಧರ್ಮೇಂದ್ರ ಪುತ್ರ ಸನ್ನಿ ಡಿಯೋಲ್ ಸ್ಪರ್ಧಿಸಿದ್ದು, ಈ ಕ್ಷೇತ್ರದಿಂದ ಅವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಪಕ್ಷದಿಂದ ಸುನಿಲ್ ಜಖಾರ್ ಸ್ಪರ್ಧೆ ಮಾಡಿದ್ದಾರೆ.
ಒಟ್ಟಾರೆ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರ  ಭವಿಷ್ಯ ನಾಳೆ ಮತಪೆಟ್ಟಿಗೆ ಸೇರಲಿದೆ. ಇನ್ನು ಇದೇ ಮೇ 23ರಂದು ಲೋಕಾಸಮರದ ಫಲಿತಾಂಶ ಪ್ರಕಟವಾಗಲಿದೆ.
SCROLL FOR NEXT