ದೇಶ

ಫಲಿತಾಂಶಕ್ಕೆ ಕ್ಷಣಗಣನೆ, ಸಂಭಾವ್ಯ ಹಿಂಸಾಚಾರ ಕುರಿತು ಕೇಂದ್ರ ಗೃಹ ಸಚಿವಾಲಯದಿಂದ ಹೈ ಅಲರ್ಟ್

Srinivasamurthy VN
ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸಂಭ್ಯಾವ್ಯ ಹಿಂಸಾಚಾರದ ಕುರಿತು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ.
ಈಗಾಗಲೇ ಇವಿಎಂಗಳ ಕುರಿತಂತೆ ವಿಪಕ್ಷ ಮುಖಂಡರು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ ಹೊಂದಿದ್ದು, ಇದರ ನಡುವೆಯೇ ಕೆಲ ನಾಯಕರು ನೀಡಿರುವ ಹೇಳಿಕೆ ಫಲಿತಾಂಶದ ಬಳಿಕ ಹಿಂಸಾಚಾರ ನಡೆಯುವ ಕುರಿತು ಶಂಕೆ ಮೂಡಿಸಿದೆ. ಫಲಿತಾಂಶ ತಮ್ಮ ವಿರುದ್ಧ ಬಂದರೆ ಇವಿಎಂ ತಿರುಚಿರುವುದು ಸ್ಪಷ್ಟವಾದಂತೆ. ಹಾಗೇನಾದರೂ ಆದರೆ ರಕ್ತಪಾತ ಸಂಭವಿಸುತ್ತದೆ ಎಂಬ ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ್ ಅವರ ಹೇಳಿಕೆ ಇದೀಗ ಭಾರಿ ಸುದ್ದಿಗೆ ಗ್ರಾಸವಾಗಿದೆ.
ಈ ಹೇಳಿಕೆ ಬೆನ್ವಲ್ಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಫಲಿತಾಂಶದ ಬಳಿಕ ಉಂಟಾಗಬಹುದಾದ ಹಿಂಸಾಚಾರದ ಕುರಿತುತಂತೆ ಎಚ್ಚರಿಕೆ ನೀಡಿದ್ದು, ಹೈ ಅಲರ್ಟ್ ಘೋಷಣೆ ಮಾಡಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಸಂಭಾವ್ಯ ಹಿಂಸಾಚಾರ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. 
ಇನ್ನು ಕೇಂದ್ರ ಗೃಹ ಸಚಿವಾಲಯ ಈ ಸಂಬಂಧ ಕೆಲ ಶಂಕಿತ ದೂರವಾಣಿ ಕರೆಗಳನ್ನು ಆಲಿಸಿದ್ದು, ಫಲಿತಾಂಶದ ಬೆನ್ನಲ್ಲೇ ಹಿಂಸಾಚಾರಕ್ಕೆ ಕುಮಕ್ಕು ನೀಡುವ ನಿಟ್ಟಿನಲ್ಲಿ ಕೆಲವರು ಮಾತನಾಡಿರುವ ಕುರಿತು ಮಾಹಿತಿ ಕಲೆ ಹಾಕಿದೆ. ಇದೇ ಕಾರಣಕ್ಕೆ ಗೃಹ ಸಚಿವಾಲಯ ಹೈ ಅಲರ್ಟ್ ಘೋಷಣೆ ಮಾಡಿದೆ ಎನ್ನಲಾಗಿದೆ.
SCROLL FOR NEXT