ದೇಶ

ಮತಎಣಿಕೆಗೆ ಕ್ಷಣಗಣನೆ; ವಿಪಕ್ಷಗಳಿಗೆ ಮತ್ತೆ ಹಿನ್ನಡೆ, ವಿವಿಪ್ಯಾಟ್ ಬೇಡಿಕೆ ತಿರಸ್ಕರಿಸಿದ ಚುನಾವಣಾ ಆಯೋಗ

Srinivasamurthy VN
ನವದೆಹಲಿ: ಲೋಕಸಭಾ ಚುನಾವಣೆಯ ಮತಎಣಿಕೆ ಕಾರ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಇವಿಎಂ ಸಂಬಂಧ ತೀವ್ರ ಅಸಮಾಧಾನಗೊಂಡಿರುವ ವಿಪಕ್ಷಗಳಿಗೆ ಮತ್ತೆ ಚುನಾವಣಾ ಆಯೋಗ ನಿರಾಸೆ ಮಾಡಿದ್ದು, ಮೊದಲಿಗೆ ವಿವಿಪ್ಯಾಟ್​ ಎಣಿಕೆ ಸಾಧ್ಯವಿಲ್ಲ ಎಂದು ಹೇಳಿದೆ.
ವಿದ್ಯುನ್ಮಾನ ಮತಯಂತ್ರಗಳ ಕುರಿತಂತೆ ಅನುಮಾನ ವ್ಯಕ್ತಪಡಿಸಿರುವ ವಿಪಕ್ಷಗಳು ಫಲಿತಾಂಶ ಪ್ರಕಟಣೆ ದಿನ ಅಂದರೆ ನಾಳೆ ಮೊದಲು ವಿವಿಪ್ಯಾಟ್ ನಲ್ಲಿನ ಸ್ಲಿಪ್ ಗಳನ್ನು ಮೊದಲು ಎಣಿಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಕೆ ಮಾಡಿದ್ದವು. ಆದರೆ ಈ ಮನವಿಯನ್ನು ತಿರಸ್ಕರಿಸಿರುವ ಚುನಾವಣಾ ಆಯೋಗ, ಮೊದಲು ವಿವಿಪ್ಯಾಟ್ ಗಳ ಸ್ಲಿಪ್ ಗಳ ಎಣಿಕೆ ಸಾದ್ಯವಿಲ್ಲ ಎಂದು ಹೇಳಿ ವಿಪಕ್ಷಗಳ ಅರ್ಜಿಯನ್ನು ತಿರಸ್ಕರಿಸಿದೆ.
ಅಂತೆಯೇ ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವ ಆಯೋಗ, ಮತ ಎಣಿಕೆ ಕಾರ್ಯದ ವೇಳೆ ಆಯಾ ಪಕ್ಷಗಳು ಏಜೆಂಟರುಗಳು, ಅಭ್ಯರ್ಥಿಗಳು ಇರುತ್ತಾರೆ. ಮತಎಣಿಕೆ ಕಾರ್ಯಕ್ಕಾಗಿ ಅಧಿಕಾರಿಗಳಿಗೆ ಈಗಾಗಲೇ ಸಲಹೆ ಮತ್ತು ಸೂಚನೆ ನೀಡಲಾಗಿದ್ದು, ಅದಿಕಾರಿಗಳಿಗೆ ಮತ ಎಣಿಕೆ ಕುರಿತಂತೆ ತರಬೇತಿ ಕೂಡ ನೀಡಲಾಗಿದೆ. ಹೀಗಾಗಿ ಅಂತಿಮ ಕ್ಷಣದಲ್ಲಿ ಮತಎಣಿಕೆ ಪ್ರಕ್ರಿಯೆಯನ್ನು ಬದಲಿಸುವುದು ತಾಂತ್ರಿಕವಾಗಿ ಅಸಾಧ್ಯ. ಇದೇ ಕಾರಣಕ್ಕೆ ವಿಪಕ್ಷಗಳ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದೆ.
22 ವಿರೋಧ ಪಕ್ಷಗಳ ಪ್ರತಿನಿಧಿಗಳು ಮಂಗಳವಾರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ, ಇವಿಎಂನ ಮತಗಳನ್ನು ಎಣಿಕೆ ಮಾಡುವ ಮೊದಲು ವಿವಿಪ್ಯಾಟ್​ ಸ್ಲಿಪ್​ಗಳನ್ನು ಎಣಿಕೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದವು. ಇದರ ಜೊತೆಗೆ ಅವರು ವಿವಿಪ್ಯಾಟ್​ ಸ್ಲಿಪ್​ ಮತ್ತು ಇವಿಎಂನಲ್ಲಿ ಮತ ಎಣಿಕೆಯಲ್ಲಿ ಶೇ.100ರಷ್ಟು ಪಕ್ಕಾ ಹೊಂದಾಣಿಕೆಯಾಗಿರುವುದನ್ನು ಖಚಿತಪಡಿಸಿದ ನಂತರವೇ ಫಲಿತಾಂಶ ಪ್ರಕಟಿಸಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದವು. ವಿರೋಧ ಪಕ್ಷಗಳ ನಾಯಕರ ಸಭೆ ವೇಳೆ ಈ ಬೇಡಿಕೆಯನ್ನು ಚುನಾವಣಾ ಆಯೋಗ ಆರಂಭದಲ್ಲಿ ಒಪ್ಪಿಕೊಂಡಿತ್ತು. ಆದರೆ, ಬುಧವಾರ ನಡೆದ ಮತ್ತೊಂದು ಸಭೆಯ ನಂತರ ಆಯೋಗ ಈ ಬೇಡಿಕೆಯನ್ನು ತಿರಸ್ಕರಿಸಿದೆ ಎನ್ನಲಾಗಿದೆ.
ಪ್ರಜಾ ಪ್ರಭುತ್ವದ ಕರಾಳ ದಿನ ಎಂದ ವಿಪಕ್ಷಗಳು
ಇನ್ನು ಚುನಾವಣಾ ಆಯೋಗ ಕ್ರಮವನ್ನು ಖಂಡಿಸಿರುವ ವಿಪಕ್ಷಗಳು ಚುನಾವಣಾ ಆಯೋಗದ ಕ್ರಮಕ್ಕೆ ತೀವ್ರ ಅಸಮಾಧನ ವ್ಯಕ್ತಪಡಿಸಿವೆ. ಅಂತೆಯೇ ಚುನಾವಣಾ ಆಯೋಗದ ಕ್ರಮಕ್ಕೆ ತಿರುಗೇಟು ನೀಡಿರುವ ವಿಪಕ್ಷಗಳು ಇದು 'ಪ್ರಜಾಪ್ರಭುತ್ವದ ಕರಾಳ ದಿನ' ಎಂದು ಟೀಕೆ ಮಾಡಿವೆ.
SCROLL FOR NEXT