ದೇಶ

ನೆಹರೂ, ಇಂದಿರಾ ಬಳಿಕ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದ ಮೊದಲ ಪ್ರಧಾನಿ ಮೋದಿ

Srinivasamurthy VN
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ 302 ಸ್ಥಾನಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಜಯ ಗಳಿಸಿರುವ ಪ್ರಧಾನಿ ಮೋದಿ, ಈ ಭರ್ಜರಿ ಜಯದ ಮೂಲಕ ಈ ಹಿಂದೆ ಮಾಜಿ ಪ್ರಧಾನಿ ಗಳಾದ ದಿವಂಗತ ಇಂದಿರಾಗಾಂಧಿ ಮತ್ತು ದಿವಂಗತ ಜವಹರ್ ಲಾಲ್ ನೆಹರು ಅವರು ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಹಾಲಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ್ದು, ಈ ಗೆಲುವು 2014ರ ಲೋಕಸಭಾ ಚುನಾವಣಾ ಗೆಲುವನ್ನೂ ಮೀರಿಸುವಂತಿದೆ ಎನ್ನಲಾಗುತ್ತಿದೆ. ಆ ಮೂಲಕ ಪ್ರಧಾನಿ ಮೋದಿ ದೇಶದ ರಾಜಕೀಯ ಇತಿಹಾಸದಲ್ಲೇ ಅಪೂರ್ವ ಸಾಧನೆ ಗೈದಿದ್ದು, ಸ್ವಂತ ಬಲದ ಮೇಲೆ ಸತತ 2ನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದ ದೇಶದ ಮೂರನೇ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಅಂತೆಯೇ ಈ ಸಾಧನೆಗೈದ ದೇಶದ ಮೊಟ್ಟ ಮೊದಲ ಕಾಂಗ್ರೆಸೇತರ ಪ್ರಧಾನಿ ಎಂಬ ಕೀರ್ತಿಗೂ ಮೋದಿ ಭಾಜನರಾಗಿದ್ದಾರೆ. 1971ರ ನಂತರ ಯಾವ ಪ್ರಧಾನಿ ಕೂಡ ಸತತ ಎರಡನೇ ಬಾರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರಲಿಲ್ಲ. ಆದರ ಮೋದಿ ಇದೀಗ ಈ ಸಾಧನೆ ಮಾಡಿದ್ದಾರೆ. 
1971ರಲ್ಲಿ ಇಂದಿರಾ ಗಾಂಧಿ ಅವರು ಸತತ ಎರಡನೇ ಬಾರಿ ಬಹುಮತದೊಂದಿಗೆ ಪ್ರಧಾನಿಯಾಗಿದ್ದರು. 1971ರ ನಂತರ ಕಾಂಗ್ರೆಸ್ ಪಕ್ಷ ಸತತವಾಗಿ ಅಧಿಕಾರಕ್ಕೆ ಬಂದಿತ್ತಾದರೂ ಪ್ರಧಾನಿಗಳು ಬದಲಾಗಿದ್ದರು. 2004 ರಿಂದ 2009 ಮತ್ತು 2009ರಿಂದ 2014ರವರೆಗೂ ಮನಮೋಹನ್ ಸಿಂಗ್ ಸತತ ಎರಡು ಬಾರಿ ಪ್ರಧಾನಿಯಾದರೂ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇಲ್ಲದೆ ಮೈತ್ರಿಕೂಟದ ಸಹಾಯದಿಂದ ಸರ್ಕಾರ ರಚನೆ ಮಾಡಿತ್ತು, ಆದರೆ ಇದೀಗ  48 ವರ್ಷಗಳ ನಂತರ ಮೊದಲ ಬಾರಿಗೆ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿದ್ದು, ಈ ಹಿಂದೆ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಮಾಡಿದ್ದ ಈ ಸಾಧನೆಯನ್ನು ಪ್ರಧಾನಿ ಮೋದಿ ಮಾಡಿ ತೋರಿಸಿದ್ದಾರೆ.
SCROLL FOR NEXT