ಕರ್ನಾಟಕ

ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಮಹಿಳಾ ಆಯೋಗ ನೋಟಿಸ್‌

Lingaraj Badiger
ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧದ 'ಮೀ ಟೂ' ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗ ತೇಜಸ್ವಿ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್‍ ಸಮಿತಿ(ಕೆಪಿಸಿಸಿ) ಮಹಿಳಾ ಘಟಕದ ದೂರು ಆಧರಿಸಿ ಮಹಿಳಾ ಆಯೋಗ ತೇಜಸ್ವಿಗೆ ನೋಟಿಸ್ ಜಾರಿ ಮಾಡಿದ್ದು, ಏಪ್ರಿಲ್‌ 3ರಂದು ಮಧ್ಯಾಹ್ನ 12 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪ್ರಕಟಣೆ ಹೊರಬಿದ್ದ ಬೆನ್ನಲ್ಲೇ ಮಹಿಳಾ ಉದ್ಯಮಿ ಡಾ. ಸೋಮ್‌ ದತ್ತಾ ಎಂಬುವರು ತಾವು ತೇಜಸ್ವಿ ಅವರೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದು, ಅದು ದುರಂತದಲ್ಲಿ ಅಂತ್ಯಗೊಂಡಿದೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.
ನಾವು ಬಹಳ ಆಳವಾದ ಪ್ರೀತಿಯಲ್ಲಿದ್ದೆವು. ಆತ 23 ವರ್ಷ ವಯಸ್ಸಿನವನಿದ್ದಾಗಿಂದ ನಮ್ಮ ಸಂಬಂಧ ಏರ್ಪಟ್ಟಿತ್ತು. ಈಗ ಆ ವಿಷಯಗಳನ್ನು ಸಾರ್ವಜನಿಕವಾಗಿ ಕೆದಕಲು ಇಷ್ಟವಿಲ್ಲ. ಅದರಿಂದ ಯಾರಿಗೂ ಪ್ರಯೋಜನವಿಲ್ಲ. ನನ್ನ ಪಾಲಕರಿಗೆ ಇದರಿಂದ ನೋವುಂಟುವಾಗುತ್ತದೆ ಎಂದು ಟ್ವೀಟ್‌ ಮಾಡಿದ್ದರು. ನಂತರ, ಅದನ್ನು ಅಳಿಸಿ ಹಾಕಿದ್ದರು. ಆದರೆ, ಅಷ್ಟರಲ್ಲಿ ಆ ಟ್ವೀಟ್ ಗಳನ್ನುಶೇರ್‌ ಮಾಡಿದ್ದ ಕರ್ನಾಟಕ ಕಾಂಗ್ರೆಸ್‌ ‘ಮೀ ಟೂ’ಎಂದು ಆರೋಪ ಮಾಡಿತ್ತು. ನಂತರ, ಮಹಿಳಾ ಘಟಕವು ಆಯೋಗಕ್ಕೆ ದೂರು ನೀಡಿತ್ತು.
ಆದರೆ, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ತೇಜಸ್ವಿ ಸಮರ್ಥನೆ ನೀಡಿದ್ದಾರೆ. ಡಾ. ಸೋಮ್‌ ದತ್ತ ಅವರು ನನ್ನ ಆತ್ಮೀಯ ಸ್ನೇಹಿತರು. ನನ್ನ ವಿರುದ್ಧ ಮಾಡಿದ್ದ ಟ್ವೀಟ್ ಅನ್ನು ಅವರೇ ಡಿಲೀಟ್ ಮಾಡಿದ್ದಾರೆ. ಇದನ್ನು ಮುಂದುವರಿಸದಂತೆ ಮನವಿ ಮಾಡಿದ್ದಾರೆ. ಇದನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
SCROLL FOR NEXT