ಕರ್ನಾಟಕ

ಮೋದಿ ದೇಶ ರಕ್ಷಣೆ ಬಗ್ಗೆ ದೇವೇಗೌಡರಿಂದ ಕಲಿಯಲಿ: ಸಿಎಂ ಕುಮಾರಸ್ವಾಮಿ

Lingaraj Badiger
ಬೆಂಗಳೂರು: ದೇಶ ರಕ್ಷಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಪಾಠ ಹೇಳುವ ಅಗತ್ಯವಿಲ್ಲ. ದೇಶ ರಕ್ಷಣೆ ಬಗ್ಗೆ ಗೌಡರು ಪ್ರಧಾನಿಯಾಗಿದ್ದಾಗ ಕೈಗೊಂಡ ಕಾರ್ಯಯೋಜನೆಗಳಿಂದ ಮೋದಿ ಕಲಿಯುವುದು ಸಾಕಷ್ಟಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಗಳವಾರ ತಿರುಗೇಟು ನೀಡಿದ್ದಾರೆ.
ದೇಶ ರಕ್ಷಣೆ ಹೇಗೆ, ಯಾವ ರೀತಿ ಭದ್ರತಾ ವ್ಯವಸ್ಥೆ ರೂಪಿಸಬೇಕು ಎಂಬುದನ್ನು ಮೊದಲು ಮೋದಿ ತಿಳಿಯಬೇಕಿದೆ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಮಾಡಿದ ಕೆಲಸಗಳನ್ನು ನೋಡಿಯಾದರೂ ಮೋದಿ ತಿಳಿದುಕೊಳ್ಳುವುದು ಸೂಕ್ತ ಎಂದರು.
ದೇಶದಲ್ಲಿ ಉಗ್ರವಾದವನ್ನು ಕಾಂಗ್ರೆಸ್ ಬೆಂಬಲಿಸುತ್ತಿದ್ದು, ಕಾಂಗ್ರೆಸ್‍ ನಾಯಕರಿಗೆ ದೇವೇಗೌಡರು ಸಹಕರಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿಕೆಗೆ ನಗರದಲ್ಲಿಂದು ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಾಗಲಿ ಅಥವಾ ಇತರೆ ಬೇರೆ ಯಾವುದೇ ನಾಯಕರಾಗಲಿ ಉಗ್ರವಾದಕ್ಕೆ ಬೆಂಬಲ ಕೊಡುತ್ತಿಲ್ಲ. ಯಾವುದೇ ಉಗ್ರರ ಪರವಾಗಿಯೂ ಕಾಂಗ್ರೆಸ್ ಸಹಕರಿಸಿಲ್ಲ. ಈ ರೀತಿಯಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದು ಪ್ರಧಾನಿ ಹುದ್ದೆಯಲ್ಲಿರುವ ಮೋದಿ ಅವರಿಗೆ ಶೋಭೆ ತರುವುದಿಲ್ಲ. ಪ್ರಧಾನಿ ಹುದ್ದೆಯಲ್ಲಿರುವ ಮೋದಿ ಒಬ್ಬ ಸುಳ್ಳುಗಾರ ಎಂದರು.
ಭಾರತೀಯರಾಗಿರುವ ನಾವೂ ಸಹ ಹಿಂದೂಗಳೇ. ನಮಗೂ ದೇಶದ ರಕ್ಷಣೆ ಹೇಗೆ ಮಾಡಬೇಕು ಎಂಬ ಬಗ್ಗೆ ಅರಿವಿದೆ. ಹಿಂದೂಗಳ ಹೆಸರಿನಲ್ಲಿ ದೇಶ ಒಡೆಯುವ ಬಿಜೆಪಿ ನಾಯಕರ ಕೃತ್ಯ ಖಂಡನೀಯ ಎಂದು ಅವರು ಕಿಡಿಕಾರಿದರು.
ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ನೆಗೆದು ಬೀಳಲಿದ್ದಾರೆ ಎಂಬ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಚುನಾವಣೆ ಮುಗಿಯಲಿ. ಫಲಿತಾಂಶ ಬಂದ ಬಳಿಕ ಯಾರು ನೆಗೆದು ಬೀಳುತ್ತಾರೆ ಎನ್ನುವುದು ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ತಿರುಗೇಟು ನೀಡಿದರು.
SCROLL FOR NEXT