ಬೆಂಗಳೂರು: ದಿಢೀರ್ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗುರುವಾರ ಆಕಸ್ಮಿಕವಾಗಿ ಮುಖಾಮುಖಿಯಾದರು. ಈ ವೇಳೆ ಪರಸ್ವರ ಶುಭಾಶಯ ಕೋರುವ ಮೂಲಕ ನೆರೆದಿದ್ದವರಿಗೆ ಅಚ್ಚರಿಯನ್ನುಂಟು ಮಾಡಿದರು.
ಹೌದು ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದ ಗೋಷ್ಠಿಗೆ ಆಗಮಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಗೋಷ್ಠಿ ಮುಗಿಸಿ ಹೊರಬರುವ ವೇಳೆ ಸುಮಲತಾ ಅಂಬರೀಶ್ ಮಾಧ್ಯಮ ಸಂವಾದಕ್ಕೆ ಆಗಮಿಸಿದರು. ಈ ವೇಳೆ ವಿಶ್ವನಾಥ್ ಅವರಿಗೆ ಸುಮಲತಾ ಹೂಗುಚ್ಚ ನೀಡಿ ಶುಭಕೋರಿದರು.
ಈ ವೇಳೆ ಎಚ್.ವಿಶ್ವನಾಥ್ ಗಟ್ಟಿಗಿತ್ತೀ ಇದ್ದೀಯಮ್ಮಾ. ಸರ್ಕಾರವನ್ನೇ ಎದುರು ಹಾಕಿಕೊಂಡು ಚುನಾವಣೆಗೆ ಇಳಿದಿದ್ದೀಯ ಒಳ್ಳೆಯದಾಗಲಿ ಎಂದು ಹರಸಿದರು. ಸುಮಲತಾ ಅಂಬರೀಶ್ ಅವರ ಚುನಾವಣೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ, ಸೌಜನ್ಯ ಹಾಗೂ ಜನರನ್ನು ಆಕರ್ಷಿಸುತ್ತಿರುವ ವಿಧಾನಕ್ಕೆ ಹಿರಿಯ ನಾಯಕ ವಿಶ್ವನಾಥ್ ಅಚ್ಚರಿ ವ್ಯಕ್ತಪಡಿಸಿದರು.
ಸುಮಲತಾ ಅಂಬರೀಶ್ ಹಾಗೂ ವಿಶ್ವನಾಥ್ ಭೇಟಿಯಾದ ಕ್ಷಣವನ್ನು ಕುತೂಹಲದಿಂದ ಮಾಧ್ಯಮಗಳ ಕ್ಯಾಮೆರಾಗಳು ಸೆರೆ ಹಿಡಿದವು. ಕೆಲ ಹೊತ್ತು ಮಾಧ್ಯಮಗಳಿಗೆ ಇಬ್ಬರು ಪೋಸು ಕೊಟ್ಟು, ಬಳಿಕ ವಿಶ್ವನಾಥ್ ಅಲ್ಲಿಂದ ತೆರಳಿದರು. ಸುಮಲತಾ ಸಹ ಮಾಧ್ಯಮ ಸಂವಾದದತ್ತ ಹೆಜ್ಜೆ ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics