ಕರ್ನಾಟಕ

ಕಾಂಗ್ರೆಸ್ ದೇಶದ್ರೋಹಿಗಳನ್ನು ಬೆಂಬಲಿಸುತ್ತಿದೆ: ದೇಶ ವಿಭಜನೆಗೆ ಕುಮ್ಮಕ್ಕು ಕೊಡುತ್ತಿದೆ: ಆರ್.ಅಶೋಕ್

Shilpa D
ಬೆಂಗಳೂರು: ಕಾಂಗ್ರೆಸ್ ದೇಶದ್ರೋಹಿಗಳನ್ನು ಬೆಂಬಲಿಸುತ್ತಿದೆ. ಇದಕ್ಕೆ ಅವರ ಚುನಾವಣಾ ಪ್ರಣಾಳಿಕೆಯೇ ಸಾಕ್ಷಿ. ದೇಶದಲ್ಲಿದ್ದು ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವವರು, ಪಾಕಿಸ್ತಾನಕ್ಕೆ ಮಾಹಿತಿ ಕೊಡುವವರನ್ನು ಪೊಲೀಸರು ಬಂಧಿಸಲು ದೇಶದ್ರೋಹ ಕಾಯ್ದೆ ಅಸ್ತ್ರವಾಗಿದೆ, ಆದರೆ ಇದಕ್ಕೆ ತಿದ್ದು ಪಡಿ ತರುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ ಎಂದು ಮಾಜಿ ಡಿಸಿಎಂ ಹಾಗೂ ಬಿಜೆಪಿ ಮುಖಂಡ ಆರ್, ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನಮ್ಮ ಸೇನಾ ಪಡೆಗಳಿಗೆ ನೀಡಲಾಗಿರುವ ವಿಶೇಷಾಧಿಕಾರವನ್ನು ತಿದ್ದುಪಡಿ ಮೂಲಕ ವಾಪಸ್ ಪಡೆಯುವುದಾಗಿ  ಹೇಳಿಕೊಂಡಿದೆ. ಈ ಮೂಲಕ ದೇಶ ವಿಭಜನೆಗೆ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದೆ ಎಂದು ಆರ್.ಅಶೋಕ್ ದೂರಿದರು.
ಮಂಡ್ಯದಲ್ಲಿ ಪ್ರಚಾರ ಮಾಡುತ್ತಿರುವ ಚಿತ್ರ ನಟರನ್ನು ಕಳ್ಳೆತ್ತುಗಳು ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರು ಕರೆಯುತ್ತಿದ್ದಾರೆ. ಇದು ಸರಿಯಲ್ಲ. ಕಳ್ಳೆತ್ತುಗಳು ಎಂದವರು ಕುಂಟೆತ್ತುಗಳು. ಅವರಿಗೆ ನಡೆಯುವುದಕ್ಕೆ ಆಗುವುದಿಲ್ಲ. ಮೇಲಾಗಿ ಮಹಿಳೆಗೆ ಅಪಮಾನ ಮಾಡುತ್ತಿದ್ದಾರೆ. ಹೀಗಾಗಿ ಹೊರೆ ಹೊತ್ತ ಮಹಿಳೆಯ ಚಿಹ್ನೆಯನ್ನು ಜೆಡಿಎಸ್‍ನವರು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್-ಜೆಡಿಎಸ್ ನಾಯಕರು ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಉಡುಗೊರೆಗಳನ್ನು ಹಂಚಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ ಎಂದು ತಿಳಿಸಿದರು.
SCROLL FOR NEXT