ಕರ್ನಾಟಕ

ಆಗ ಬಿಜೆಪಿ, ಈಗ ಕಾಂಗ್ರೆಸ್... ಮುಂದೆ ನನ್ನ ಜೆಡಿಎಸ್​​​ ಅಭ್ಯರ್ಥಿ ಎಂದರೂ ಅಚ್ಚರಿ ಇಲ್ಲ: ಎಚ್ ಡಿಕೆಗೆ ಸುಮಲತಾ ಟಾಂಗ್!

Srinivasamurthy VN
ಮಂಡ್ಯ: ಮೊದಲು ಬಿಜೆಪಿ ಅಭ್ಯರ್ಥಿ ಎನ್ನುತ್ತಿದ್ದರು, ಈಗ ಕಾಂಗ್ರೆಸ್ ಅಭ್ಯರ್ಥಿ ಎನ್ನುತ್ತಿದ್ದಾರೆ.. ಮುಂದೆ ನನ್ನನ್ನು ಜೆಡಿಎಸ್ ಅಭ್ಯರ್ಥಿ ಎಂದರೂ ಅಚ್ಚರಿಯಿಲ್ಲ ಎಂದು ಹೇಳುವ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ಸುಮಲತಾ ಅಂಬರೀಶ್ ಭರ್ಜರಿ ಟಾಂಗ್ ನೀಡಿದ್ದಾರೆ.
ಈ ಹಿಂದೆ ಮಾಧ್ಯಮಗಳಲ್ಲಿ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ, ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ಯರು ಹಾಗೂ ಸ್ಥಳೀಯ ಮುಖಂಡರು ಬೆಂಬಲ ನೀಡಿದ್ದು, ಅವರು ಈಗ ಪಕ್ಷೇತರ ಅಭ್ಯರ್ಥಿಯಾಗಿ ಉಳಿದಿಲ್ಲ ಎಂದು ಹೇಳುವ ಮೂಲಕ ಸ್ಥಳೀಯ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಕುಮಾರಸ್ವಾಮಿ ಅವರ ಹೇಳಿಕೆಗೆ ಇಂದು ಮಂಡ್ಯದಲ್ಲಿ ಭರ್ಜರಿ ತಿರುಗೇಟು ನೀಡಿರುವ ಸುಮಲತಾ ಅಂಬರೀಶ್ ಅವರು, 'ಮೊದಲು ಬಿಜೆಪಿ, ಈಗ ಕಾಂಗ್ರೆಸ್​​​, ಮುಂದೆ ನನ್ನ ಜೆಡಿಎಸ್​​ ಅಭ್ಯರ್ಥಿ ಎಂದ್ರು ಅಚ್ಚರಿಯಿಲ್ಲ. ನಾನು ಮಂಡ್ಯ ಜನರಿಗಾಗಿಯೇ ಸ್ಪರ್ಧೆ ಮಾಡಿದ್ದೇನೆ. ಅವರು ಹೇಳಿದಂತೆಯೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಚುನಾವಣೆ ಮುಗಿದ ಕೂಡಲೇ ನಾನು ಬಿಜೆಪಿ ಸೇರುತ್ತೇನೆ, ಮಂಡ್ಯ ಬಿಟ್ಟು ಹೋಗುತ್ತೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ. ಇದಕ್ಕೆಲ್ಲಾ ನಾವು ಕಿವಿಗೊಡಬಾರದು. ಚುನಾವಣೆಯಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ಜನರೇ ನನ್ನ ಪರವಾಗಿ ಉತ್ತರ ನೀಡಲಿದ್ದಾರೆ ಎಂದು ಅಂಬರೀಶ್​​ ಪತ್ನಿ ವಿಶ್ವಾಸ ವ್ಯಕ್ತಪಡಿಸಿದರು' ಎಂದು  ಸ್ಪಷ್ಟಪಡಿಸಿದ್ಧಾರೆ. 
ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​​​, 'ತಾವು ಬಿಜೆಪಿಗೆ ಸೇರುವುದಿಲ್ಲ. ಬಿಜೆಪಿ ನನಗೆ ಬೆಂಬಲ ನೀಡಿದೆ. ತಮ್ಮ ಪಕ್ಷಕ್ಕೆ ಬನ್ನಿ ಎಂಬ ಯಾವುದೇ ಷರತ್ತು ಹಾಕಿಲ್ಲ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಇಲ್ಲಿನ ಜನರ ಸೇವೆ ಮಾಡುತ್ತೇನೆ. ಅವರು ಹೇಳಿದಂತೆಯೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು. ಇದೇ ವೇಳೆ 'ಹಾಗೆಯೇ ನಾನು ಮಂಡ್ಯ ಬಿಟ್ಟು ಹೋಗುವುದಿಲ್ಲ. ಗೆದ್ದ ಮೇಲೆ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
SCROLL FOR NEXT