ಕರ್ನಾಟಕ

ಜೀನ್ಸ್, ಡಿಎನ್ಎ ನೋಡಿಕೊಂಡು ಟಿಕೆಟ್ ಕೊಡಕಾಗತ್ತಾ?: ಬಿ ಎಲ್ ಸಂತೋಷ್

Sumana Upadhyaya
ಚಾಮರಾಜನಗರ: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆರಂಭದಲ್ಲಿ ತೇಜಸ್ವಿನಿ ಅನಂತ್‍ಕುಮಾರ್ ಅವರೇ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿತವಾಗಿ ಅವರು ಪ್ರಚಾರ ಕಾರ್ಯವನ್ನು ಕೂಡ ಆರಂಭಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಟಿಕೆಟ್ ಅವರ ಕೈ ತಪ್ಪಿ ಹೋಗಿ ಹೊಸ ಯುವಕ ತೇಜಸ್ವಿ ಸೂರ್ಯ ಪಾಲಾಯಿತು. ಅವರಿಗೆ ಬಿಜೆಪಿ ಟಿಕೆಟ್ ತಪ್ಪಿದ್ದರ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಸ್ತಕ್ಷೇಪವಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದಕ್ಕೆ ಸ್ವತಃ ಸಂತೋಷ್ ಅವರೇ ನಿನ್ನೆ ಚಾಮರಾಜನಗರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಜೀನ್ಸ್, ಡಿಎನ್‍ಎ ನೋಡಿ ಟಿಕೆಟ್ ಕೊಡ್ತಾ ಹೋದ್ರೆ ಪಾರ್ಟಿ ಮೆಂಬರ್ ಸ್ಲಿಪ್‍ಗೆ ಬೆಲೆ ಬೇಕಲ್ಲ ಎಂದು ಹೇಳುವ ಮೂಲಕ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಟಿಕೆಟ್ ತಪ್ಪಿದೆ ಎಂದು ಬಿ.ಎಲ್. ಸಂತೋಷ್ ಹೇಳಿದ್ದಾರೆ.
ಚಾಮರಾಜನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಕಟ್ಟಿದ ಇಬ್ಬರಲ್ಲಿ ದಿವಂಗತ ಅನಂತ್‍ಕುಮಾರ್ ಸಹ ಒಬ್ಬರು.
ಅನಂತ್‍ಕುಮಾರ್ ಅವರಿಗೆ ಏನು ಕ್ರೆಡಿಟ್ ಕೊಡಬೇಕು ಅದನ್ನು ಸಂಘ ಪರಿವಾರ ಹಿಂದಿನಿಂದಲೂ ಕೊಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಕೊಡುತ್ತದೆ. ಅದೇ ಕ್ರೆಡಿಟ್ ಅವರ ಪತ್ನಿ ತೇಜಸ್ವಿನಿ ಪಡೆದುಕೊಳ್ಳಬೇಕೆಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.
20-30 ವರ್ಷ ಪಾರ್ಟಿ ರಾಜಕಾರಣದಲ್ಲಿ ಮುಂದುವರಿಯಲು ಸಾಮರ್ಥ್ಯ ಇರುವವರಿಗೆ ಟಿಕೆಟ್ ಕೊಟ್ಟಿದ್ದೇವೆ. ಸದ್ಯ ಟಿಕೆಟ್ ಪಡೆದವರು ತಮ್ಮ ಸಾಮರ್ಥ್ಯವನ್ನು ಮುಂದಿನ ಐದು ವರ್ಷಗಳಲ್ಲಿ ಸಾಬೀತು ಮಾಡಬೇಕಾಗುತ್ತದೆ. ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ ಎಂದು ಹೇಳುವುದು ಸರಿಯಲ್ಲ. ಪಕ್ಷ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗಿಸಲು ಯಾರಿಗೂ ಅಗೌರವ ಸೂಚಿಸದೇ ಯುವಕರಿಗೆ ಟಿಕೆಟ್ ನೀಡಲಾಗಿದೆ ಎಂದರು.
SCROLL FOR NEXT