ಕರ್ನಾಟಕ

ತೇಜಸ್ವಿ ಸೂರ್ಯ ಸುದ್ದಿ ಪ್ರಕಟಿಸದಂತೆ ನಿರ್ಬಂಧ ಪ್ರಶ್ನಿಸಿ ಪಿಐಎಲ್; ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Srinivasamurthy VN
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಯಾವುದೇ ಮಾನಹಾನಿಕಾರ ಸುದ್ದಿಗಳನ್ನು ಪ್ರಕಟಿಸದಂತೆ ಸಿವಿಲ್ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ. 
ದೆಹಲಿಯ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ ಎಂಬ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ತೀರ್ಪನ್ನು ಗುರುವಾರಕ್ಕೆ ಕಾಯ್ದರಿಸಿದೆ. 
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್.ಎಸ್. ತೇಜಸ್ವಿ ಸೂರ್ಯ ಅವರು ನಗರದ ಸಿವಿಲ್ ಕೋರ್ಟ್‌ ಮೆಟ್ಟಿಲೇರಿ, ಮಾಧ್ಯಮಗಳಲ್ಲಿ ತಮ್ಮ ವಿರುದ್ದ ಯಾವುದೇ ಅವಹೇಳನಕಾರಿ ವರದಿ ಪ್ರಕಟಿಸದಂತೆ ತಡೆಯಾಜ್ಞೆ ಪಡೆದಿದ್ದಾರೆ. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಓರ್ವ ಚುನಾವಣಾ ಅಭ್ಯರ್ಥಿಯ ಪೂರ್ವಾಪರ ಮತ್ತು ಅವರ ಕುರಿತಾದ ಮಾಹಿತಿಯನ್ನು ಅರಿಯುವ ಹಕ್ಕು ಮತದಾರರಿಗೆ ಇದೆ. ಇದನ್ನು ನಿರ್ಬಂಧಿಸುವುದು ಮತದಾರರ ಹಕ್ಕು ಮೊಟಕುಗೊಳಿಸಿದಂತೆ. ಅಲ್ಲದೆ, ಚುನಾವಣೆ ವಿಚಾರದಲ್ಲಿ ನ್ಯಾಯಾಲಯಗಳು ಮಧ್ಯ ಪ್ರವೇಶಿಸುವಂತಿಲ್ಲ. ಆದ್ದರಿಂದ ನೀತಿ ಸಂಹಿತೆ ಜಾರಿಯಲ್ಲಿರುವಾಗ ತೇಜಸ್ವಿ ಪರ ಅಧೀನ ನ್ಯಾಯಾಲಯ ನೀಡಿದ ತೀರ್ಪು ನಿಯಮಬಾಹಿರವಾದುದು  ಎಂದು ವಾದಿಸಿದರು.
ಇದಕ್ಕೆ ಪ್ರತಿಯಾಗಿ ತೇಜಸ್ವಿ ಪರ ವಕೀಲರು, ಇದು ದುರುದ್ದೇಶಪೂರಿತ ಅರ್ಜಿ. ಅರ್ಜಿದಾರರು ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರಲ್ಲ. ಅಧೀನ ನ್ಯಾಯಾಲಯದ ಪ್ರಕರಣದಲ್ಲಿ ಪ್ರತಿವಾದಿಗಳೂ ಅಲ್ಲ. ಆದ್ದರಿಂದ ಈ ಅರ್ಜಿ ಸಲ್ಲಿಸುವ ಔಚಿತ್ಯ ಅವರಿಗಿಲ್ಲ ಎಂದು ವಾದಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತು.
SCROLL FOR NEXT