ಕರ್ನಾಟಕ

ಪಕ್ಷ ವಿರೋಧಿ ಚಟುವಟಿಕೆ; ಮಂಡ್ಯದ ಏಳು ಬ್ಲಾಕ್ ಅಧ್ಯಕ್ಷರ ಅಮಾನತ್ತುಗೊಳಿಸಿ ಕೆಪಿಸಿಸಿ ಆದೇಶ

Srinivas Rao BV
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ನಡೆಸದೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ನಿರತವಾಗಿರುವ ಪಕ್ಷದ ಏಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪಕ್ಷದಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದೆ. 
ಮಂಡ್ಯದ ಜೆಡಿಎಸ್ - ಕಾಂಗ್ರೆಸ್ ನಾಯಕರು ನೀಡಿರುವ ದೂರಿನ  ಆಧಾರದ ಮೇಲೆ ಪ್ರದೇಶ ಕಾಂಗ್ರೆಸ್ ಸಮಿತಿ ಅಮಾನತ್ತು ಕ್ರಮ ಕೈಗೊಂಡಿದೆ.
ಜಿಲ್ಲೆಯಲ್ಲಿ ಒಂದು ವರ್ಗದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರನ್ನು ಬೆಂಬಲಿಸುತ್ತಿದ್ದು,  ಇನ್ನೂ ಕೆಲವು ಮುಖಂಡರು  ಪಕ್ಷೇತರ ಅಭ್ಯರ್ಥಿ ಪರ ಪ್ರಚಾರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು, ಕಾಂಗ್ರೆಸ್ ಧ್ವಜವನ್ನೂ  ಪ್ರದರ್ಶಿಸಿದ್ದರು.
ಮಂಡ್ಯ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಹೆಚ್. ಅಪ್ಪಾಜಿ, ಭಾರತೀನಗರ ಬ್ಲಾಕ್ ಅಧ್ಯಕ್ಷ ಎ.ಎಸ್.ರಾಜೀವ್, ಮಳವಳ್ಳಿ ಬ್ಲಾಕ್ ಅಧ್ಯಕ್ಷ ಪುಟ್ಟರಾಮು, ಮಳವಳ್ಳಿ ನಗರ ಬ್ಲಾಕ್ ಅಧ್ಯಕ್ಷ ಕೆ.ಜೆ. ದೇವರಾಜು, ನಾಗಮಂಗಲ ಬ್ಲಾಕ್ ಅಧ್ಯಕ್ಷ ಎಂ ಪ್ರಸನ್ನ, ಕೆ ಆರ್ ಪೇಟೆ ಬ್ಲಾಕ್ ಅಧ್ಯಕ್ಷ ಕೆ.ಆರ್. ರವೀಂದ್ರ ಬಾಬು, ಹಾಗೂ ಮೇಲುಕೋಟೆ ಬ್ಲಾಕ್ ಅಧ್ಯಕ್ಷ  ಎಸ್.ಬಿ. ಪ್ರಕಾಶ್ ಅವರುಗಳನ್ನು ಪಕ್ಷದಿಂದ ಪಕ್ಷದಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರು, ಪದೇಪದೇ ಎಚ್ಚರಿಕೆ ನೀಡಿದರೂ ತಮ್ಮ ಮಾತು ಕೇಳದ ಸ್ಥಳೀಯ ಮುಖಂಡರಿಗೆ ಅಮಾನತ್ತು ಶಿಕ್ಷೆ ವಿಧಿಸಿದ್ದಾರೆ. 
ಬಿಜೆಪಿ ಬೆಂಬಲಪಡೆದಿರುವ ಸುಮಲತಾ ಅವರ ಪರವಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡರು  ಕೆಲಸ ಮಾಡುತ್ತಿರುವುದು, ರಾಜ್ಯ ನಾಯಕರಿಗೆ ಇರಿಸು ಮುರಿಸಿನ ಪರಿಸ್ಥಿತಿ ಉಂಟುಮಾಡಿತ್ತು. ಮಂಡ್ಯದಲ್ಲಿ ಜೆಡಿಎಸ್ ಗೆ, ಕಾಂಗ್ರೆಸ್ ಕಾರ್ಯಕರ್ತರು ಸಹಕರಿಸದಿದ್ದರೆ, ಮೈಸೂರಿನಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲ ಕಾಂಗ್ರೆಸ್ ಅಭ್ಯರ್ಥಿ ಲಭಿಸದಿರುವ ಸಾಧ್ಯತೆ ಹಿನ್ನಲೆಯಲ್ಲಿ ಮಂಡ್ಯ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಅನಿವಾರ್ಯವಾಗಿತ್ತು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಾಡಿದ್ದು ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್ ನಗರದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಅಮಾನತ್ತುಗೊಳಿಸುವ ಕ್ರಮ ಜರುಗಿಸಲಾಗಿದೆ. 
ಜೆಡಿಎಸ್ ಪರಮೋಚ್ಛ ನಾಯಕ ಹೆಚ್.ಡಿ. ದೇವೇಗೌಡ ಹಾಗೂ ಕಾಂಗ್ರೆಸ್ ಶಾಸಕಾಂಗಪಕ್ಷದ ನಾಯಕ ಸಿದ್ಧರಾಮಯ್ಯ ನಾಳೆ ಮಂಡ್ಯದಲ್ಲಿ ಜಂಟಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
SCROLL FOR NEXT