ಕರ್ನಾಟಕ

ಧೈರ್ಯವಿದ್ದರೆ ನನ್ನ ಐದು ಪ್ರಶ್ನೆಗೆಳಿಗೆ ಉತ್ತರಿಸಿ: ಪ್ರಧಾನಿ ಮೋದಿಗೆ ದಿನೇಶ್ ಗುಂಡೂರಾವ್ ಸವಾಲು

Srinivasamurthy VN
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೈರ್ಯವಿದ್ದರೆ ನನ್ನ ಐದು ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಹಿರಂಗ ಸವಾಲು ಹಾಕಿದ್ದಾರೆ.
ರಾಜ್ಯಕ್ಕೆ ನಾಳೆ ಅಂದರೆ ಶನಿವಾರ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಂಚ ಪ್ರಶ್ನೆಗಳ ಸವಾಲನ್ನು ಎಸೆದಿದ್ದು, ನಾಳೆ ರಾಜ್ಯದ ವಿವಿಧೆಡೆ ಪ್ರಚಾರಕ್ಕೆ ಆಗಮಿಸುವ ಪ್ರಧಾನಿ ಮೋದಿ ಅವರು ತಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಅವರು ಕೇಳಿದ್ದಾರೆ. 'ಬಿಜೆಪಿ ಹೇಳಿಕೊಳ್ಳುವ ಯಾವುದೇ ಸಾಧನೆಗಳನ್ನು ದೇಶದಲ್ಲಿ ಮತ್ತು ರಾಜ್ಯದಲ್ಲಿ ಮಾಡಿಲ್ಲ. ಹೀಗಾಗಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಮೋದಿ ಜನರನ್ನು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಿಮಗೆ ನೈತಿಕತೆಯಿದ್ದರೆ ತಮ್ಮ ಪಂಚ ಪ್ರಶ್ನೆಗಳಿಗೆ ಉತ್ತರಿಸಿ' ಎಂದಿದ್ದಾರೆ.
'ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡ್ಯ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಸೂಚಿಸಿ ಭಾಷಣ ಮಾಡಿದ್ದಾರೆ. ನಿಮ್ಮ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ ಅನಂತ್ ಕುಮಾರ್ ಹಾಗೂ ಅವರ ಪತ್ನಿ ತೇಜಸ್ವಿ ಅನಂತ್ ಕುಮಾರ್ ಅವರನ್ನು ಮರೆತಿದ್ದಾದರೂ ಏಕೆ ? ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ನಿಮಗಿಂತಲೂ ದೊಡ್ಡನಾಯಕರಾಗಿದ್ದರು. ಅವರ ಬಗ್ಗೆ ಎಲ್ಲಿಯೂ ಉಲ್ಲೇಖವನ್ನು ಮಾಡಲಿಲ್ಲವೇಕೆ. ಅವರಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿದವರನ್ನು ಮರೆತಿರುವ ಉದ್ದೇಶವಾದರೂ ಏನು' ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.
ಅಂತೆಯೇ 'ಹಿಂದಿನ ಯುಪಿಎ ಸರ್ಕಾರದ ಅಧಿಕಾರವಧಿಯಲ್ಲಿ 2ಜಿ ಹಗರಣ ನಡೆದಿದೆ ಎಂದು ಆರೋಪಿಸಿದ್ದೀರಿ. ಕಳೆದ 5 ವರ್ಷಗಳಿಂದ ತಮ್ಮದೇ ಸರ್ಕಾರ ಅಧಿಕಾರಲ್ಲಿದೆ. 2ಜಿ ಸ್ಪೆಕ್ಟ್ರಂ ಹಗರಣವನ್ನು ಸಾಬೀತು ಮಾಡಲಿಲ್ಲ ಏಕೆ?. ಸಿಬಿಐ ಕೋರ್ಟ್ ಪ್ರಕರಣದಲ್ಲಿ ಸತ್ಯಾಂಶವಿಲ್ಲ ಎಂದು ಕೇಸನ್ನೇ ವಜಾಗೊಳಿಸಿದೆ. ತಾವು 2ಜಿ ಹಗರಣ ನಡೆದಿತ್ತು ಎಂದು ಸಮಾವೇಶಗಳಲ್ಲಿ ಹೇಳುವ ಉದ್ದೇಶವೇನು?. 2ಜಿ ಹಗರಣವನ್ನು ಜಂಟಿ ಸದನ ಸಮಿತಿ(ಜೆಪಿಸಿ) ತನಿಖೆಗೆ ನೀಡಲು ಕಾಂಗ್ರೆಸ್ ಸಿದ್ದವಾಗಿತ್ತು. ಆದರೂ ಬಿಜೆಪಿ ಜೆಪಿಸಿ ತನಿಖೆಗೆ ಸಮ್ಮತಿಸಲಿಲ್ಲ. ಪ್ರಸ್ತುತ ರೆಫೆಲ್ ಹಗರಣವನ್ನು ಜೆಪಿಸಿ ತನಿಖೆ ನಡೆಸಲು ನೀವು ಸಮ್ಮತಿಸಲಿಲ್ಲವೇಕೆ. ರೆಫೆಲ್ ಹಗರಣದ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ಕಾಲದಲ್ಲಿ ನಡೆದ ಪ್ರಕರಣಗಳನ್ನು ಹಗರಣಗಳೆನ್ನುವ ನೀವು ರೆಫೆಲ್ ಪ್ರಕರಣವನ್ನು ಹಗರಣ ಎನ್ನುತ್ತಿಲ್ಲ ಏಕೆ? ಎಂದು ಮತ್ತೊಂದು ಪ್ರಶ್ನೆಯನ್ನು ಎಸೆದಿದ್ದಾರೆ. 
ಇನ್ನು ಬಾಲಾಕೋಟ್ ಮೇಲೆ ದಾಳಿ ನಡೆಸಿ ಭಯೋತ್ಪಾದಕರ ಹೃದಯಾಂತರಾಳದಲ್ಲಿ ಭಯವನ್ನು ಹುಟ್ಟಿಸಿದ್ದೇವೆ ಎಂದು ಹೇಳುವ ನಿಮ್ಮ ಅಧಿಕಾರಾವಧಿಯಲ್ಲಿ ಅತಿ ಹೆಚ್ಚು ಭಯೋತ್ಪಾದಕರ ದಾಳಿಗಳಾಗಿವೆ. ಗಡಿ ಪ್ರದೇಶದಲ್ಲಿ ಉಗ್ರರ ದಾಳಿಯಲ್ಲಿ 498 ಸೈನಿಕರು ಹುತಾತ್ಮರಾಗಿದ್ದಾರೆ. 278  ಮುಗ್ದ ನಾಗರೀಕರು ಸಾವನ್ನಪ್ಪಿ, 542 ಯುವಕರು ಉಗ್ರಗಾಮಿಗಳಾಗಿ ಪರಿವರ್ತನೆಯಾಗಿದ್ದಾರೆ. ಕಾಂದಹಾರ್ ಅಪರಹಣ, ಉಗ್ರ ಅಜರ್ ಮಸೂದ್ ನನ್ನು ಬಿಡುಗಡೆ ಮಾಡಿದ್ದು ,ಪಠಾಣ್ ಕೋಟ್ ಮೇಲೆ ದಾಳಿ, ಸಂಸತ್ ಮೇಲೆ ದಾಳಿ, ಪುಲ್ವಾಮಾ ದಾಳಿ, ಅಮರ್ ನಾಥ್ ಯಾತ್ರಾರ್ಥಿಗಳ ಮೇಲೆ ದಾಳಿಗಳು ಬಿಜೆಪಿ ಸರ್ಕಾರದ ವೈಫಲ್ಯಗಳಲ್ಲವೇ ಎಂದು ದಿನೇಶ್ ಪ್ರಶ್ನಿಸಿದ್ದಾರೆ.
'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎನ್ನುವ ನೀವು ಲೋಕಸಭಾ ಚುನಾವಣೆಯಲ್ಲಿ ಓಬಿಸಿ ಸಮುದಾಯದ  ಒಬ್ಬರಿಗೂ ಟಿಕೆಟ್ ನೀಡದೆ ಅನ್ಯಾಯ ಎಸಗಿದ್ದೀರಿ. ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಕಡೆಗಣಿಸಿರುವ ನಿಮಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಸುಳ್ಳಿನ ಭಾಷಣವನ್ನೇಕೆ ಮಾಡುತ್ತಿದ್ದೀರಿ. ದೇಶದಲ್ಲಿ ಯಾವುದೇ ಅಭಿವೃದ್ದಿ ಮಾಡದೆ ಕೇವಲ ಭಾಷಣಗಳ ಮೂಲಕ ಜನರನ್ನು ಮರಳು ಮಾಡುತ್ತಿದ್ದೀರಿ. ರಾಜ್ಯಕ್ಕೆ ಆಗಮಿಸಿದಾಗ ಈ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ  ಸತ್ಯವನ್ನು ಬಹಿರಂಗಪಡಿಸಿ ಎಂದು ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ. 
SCROLL FOR NEXT