ಕರ್ನಾಟಕ

ಬಿಜೆಪಿಯಿಂದ ಐಟಿ ಇಲಾಖೆಯ ದುರುಪಯೋಗ, ಐಟಿ ಇಲಾಖೆಯ ಅಧಿಕಾರಿಗಳ ವರ್ಗಾವಣೆಗೆ ಕೆಪಿಸಿಸಿ ಆಗ್ರಹ

Srinivasamurthy VN
ಬೆಂಗಳೂರು: ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಐಟಿ ಇಲಾಖೆಯನ್ನು ತನ್ನ ರಾಜಕೀಯ ಕುತಂತ್ರಕ್ಕೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಬಿಜೆಪಿ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಐಟಿ ಅಧಿಕಾರಿಗಳನ್ನು ಈ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಆಗ್ರಹಿಸಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, 'ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇಂದು ಸಹ ಹಾಸನದ ಹರದನಹಳ್ಳಿಯ ಈಶ್ವರ ದೇವಾಲಯದ ಅರ್ಚಕರ ಮನೆ ಮೇಲೆ ದಾಳಿ ನಡೆಸಲಾಗಿದೆ. ದೇವಸ್ಥಾನದಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಕಚೇರಿ ಮೇಲೆ, ಪುಟ್ಟರಂಗ ಶೆಟ್ಟಿ ಕಚೇರಿ ಮೇಲೆ, ಮತ್ತೆ ಮೈಸೂರಿನಲ್ಲಿ ಸಚಿವ ಸಿ.ಎಸ್.ಪುಟ್ಟರಾಜು ಮನೆ ಮೇಲೆ ದಾಳಿ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೂಡಲೇ ರಾಜಕೀಯ ದಾಳಿ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದರು.
ಇದೇ ವೇಳೆ ಬಿಎಸ್ ವೈ ಡೈರಿ ಕುರಿತು ಪ್ರಸ್ತಾಪಿಸಿದ ಅವರು, 'ಯಡಿಯೂರಪ್ಪ ಡೈರಿ ವಿನಯ್ ಬಳಿ ಇದೆ ಎಂದು ಅವರ ಪಿಎ ಸಂತೋಷ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಹೇಳಿಕೆ ಆಧರಿಸಿ ಪೊಲೀಸರು ವಿನಯ್ ಗೆ ನೊಟೀಸ್ ಕೊಟ್ಟಿದ್ದಾರೆ. ಈಗ ಯಡಿಯೂರಪ್ಪ ಅವರ ಮೂಲ ಡೈರಿ ಪೊಲೀಸರಿಗೆ ಕೊಡುತ್ತೇನೆ ಭದ್ರತೆ ಕಲ್ಪಿಸಿ ಎಂದು ಮನವಿ ಮಾಡಿದ್ದಾರೆಂಬ ಮಾಹಿತಿ ಇದೆ. ಇದು ಹೈ- ಪ್ರೊಫೈಲ್ ಪ್ರಕರಣ, ಹೀಗಾಗಿ ಪೊಲೀಸರು ಈಶ್ವರಪ್ಪ ಪಿಎ ವಿನಯ್ ಗೆ ಭದ್ರತೆ ಕೊಡಬೇಕು. ಈ ಬಗ್ಗೆ ಸೂಕ್ತ ಹಾಗೂ ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.  ಎಐಸಿಸಿ ವಕ್ತಾರ ರಣದೀಪ್ ಸುರ್ಜೇವಾಲ ಪತ್ರಿಕಾಗೋಷ್ಟಿ ನಡೆಸಿದ ಬಳಿಕ ದಿಡೀರ್ ಆದಾಯ ತೆರಿಗೆ ಇಲಾಖೆ ನಿರ್ದೇಶಕರು ಯಡಿಯೂರಪ್ಪ ಅವರ ಡೈರಿಯಲ್ಲ. ಅದು ನಕಲಿ, ಇದೂ ಕೇವಲ ಕಾಗದದ ತುಂಡುಗಳು ಎಂದು ಸ್ಪಷ್ಟೀಕರಣ ನೀಡಿದ್ದರು. ವಿನಯ್ ಬಳಿಯಿರುವ ಡೈರಿ ಬಿಡುಗಡೆ ಮಾಡಿದ ಮೇಲೆ ಸತ್ಯಾಂಶ ಏನೆಂದು ಗೊತ್ತಾಗಲಿದೆ ಎಂದರು. 
ಅಂತೆಯೇ ಗಂಗಾವತಿಯ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಆರೋಪಕ್ಕೆ ತಿರುಗೇಟು ನೀಡಿದ ದಿನೇಶ್ ಗುಂಡೂರಾವ್, 'ಹಂಪಿ ಉತ್ಸವವನ್ನ ನಮ್ಮ ಸರ್ಕಾರ ಮಾಡಿದೆ.‌ ಕೇವಲ ಸುಳ್ಳುಗಳನ್ನು ಪ್ರಧಾನಿ ಹೇಳುತ್ತಿದ್ದಾರೆ. ಅವರಿಗೆ ಭಾಷಣ ಮಾಡಲು ಯಾವುದೇ ವಿಚಾರಗಳಿಲ್ಲದ ಕಾರಣಕ್ಕೆ ಹೀಗೆಲ್ಲಾ ಆರೋಪ ಮಾಡುತ್ತಿದ್ದಾರೆ. ಕೇವಲ ಹಂಪಿ ಉತ್ಸವ ಅಷ್ಟೇ ಅಲ್ಲ ,ವಿವಿಧ ಜಯಂತಿಗಳನ್ನು ನಮ್ಮ ಸರ್ಕಾರ ಮಾಡಿದೆ ಎಂಬುದನ್ನು ಅವರು ಮರೆತಿದ್ದಾರೆ ಎಂದು ಕಿಡಿಕಾರಿದರು. ಶೇ.20 ಕಮಿಷನ್ ಸರ್ಕಾರ ಎಂಬ ಪ್ರಧಾನಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕೇಂದ್ರ ಸರ್ಕಾರ 100% ಪರ್ಸೆಂಟ್ ಕಮಿಷನ್ ಸರ್ಕಾರವಾಗಿದೆ. ರೆಫೆಲ್ ಖರೀದಿಯಲ್ಲಿ ನೇರವಾಗಿ ಕಮಿಷನ್ ಪಡೆದಿದ್ದಾರೆ. ಅವರು ನಮ್ಮ ಸರ್ಕಾರದ ಬಗ್ಗೆ ಆರೋಪ ಮಾಡುವ ನೈತಿಕತೆಯಿಲ್ಲ ಎಂದರು.
ಲೋಕಸಭಾ ಚುನಾವಣೆ ಮೊದಲ ಹಂತದ 91 ಕ್ಷೇತ್ರಗಳ ಮತದಾನದಲ್ಲಿ ಇವಿಎಂ ಮತಯಂತ್ರ ಜನಸೇನಾ ಪಕ್ಷಕ್ಕೆ ಮತಚಲಾವಣೆ ಮಾಡಿದರೆ ಬಿಜೆಪಿಗೆ ಮತಗಳು ಬೀಳುತ್ತಿದೆ. ಇಂತಹ ದುರುಪಯೋಗ ಸಂಶಯಕ್ಕಾಗಿಯೇ ಬ್ಯಾಲೆಟ್ ಪೇಪರ್ ಬಳಸಿ ಎಂದು ಹೇಳುತ್ತಿದ್ದೇವೆ. ಎಷ್ಟೇ ಆದರೂ ಅದು ಎಲೆಕ್ಟ್ರಿಕ್ ಯಂತ್ರ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿದೆ. ಮುಂದುವರೆದ ದೇಶಗಳಲ್ಲಿ ಬ್ಯಾಲೆಟ್ ಪೇಪರ್ ಬಳಸುತ್ತಿದ್ದಾರೆ. ನಮ್ಮಲ್ಲೂ ಅದನ್ನು ಮತ್ತೆ ಜಾರಿಗೆ ತರಬೇಕು ಎಂದು ಗುಂಡೂರಾವ್ ಹೇಳಿದರು. 
ಆದಾಯ ತೆರಿಗೆ ಇಲಾಖೆ ಕಚೇರಿ ಮುಂದೆ ಕಾಂಗ್ರೆಸ್-ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿದ್ದಕ್ಕಾಗಿ ತಮಗೂ ನೋಟೀಸ್ ನೀಡಿದ್ದಾರೆ. ಅದಕ್ಕೆ ಕಾನೂನಾತ್ಮಕವಾಗಿ ನಾವು ಉತ್ತರ ನೀಡುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದಕ್ಕೆ ಅವಕಾಶವಿದೆ. ಐಟಿ ಇಲಾಖೆ ವಿಪಕ್ಷಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಅಭ್ಯರ್ಥಿಗಳು ಅಥವಾ ನಾಯಕರ ಮನೆಗಳ ಮೇಲೆ ಒಂದೂ ದಾಳಿಯಾಗಿಲ್ಲ ಏಕೆ ಎಂದು ಐಟಿ ಇಲಾಖೆಯನ್ನು ಪ್ರಶ್ನಿಸಿದ್ದಾರೆ. ಇತ್ತ ದಾಳಿ ಮಾಡಿಸಿ ಅಲ್ಲಿ ಸಮಾವೇಶಗಳಲ್ಲಿ ವಿಪಕ್ಷಗಳ ವಿರುದ್ದ ಇಷ್ಟು ಹಣ ಸಿಕ್ಕಿದೆ.ಡೈರಿ ಸಿಕ್ಕಿದೆ, ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳಲು ಕುತಂತ್ರ ಮಾಡುತ್ತಿದ್ದಾರೆ.ಕಳೆದ ಚುನಾವಣೆಯಲ್ಲಿ ನಡೆದ ದಾಳಿಗಳ ಪ್ರಕರಣಗಳು ಏನಾದವು ಎನ್ನುವ ಬಗ್ಗೆ ಪ್ರಧಾನಿ ಅವರು ಬೆಳಕು ಚೆಲ್ಲಬೇಕು ಎಂದರು.
SCROLL FOR NEXT