ಕರ್ನಾಟಕ

ಮಂಡ್ಯದಲ್ಲಿ ನಿಖಿಲ್ ಗೆ ಸೋಲು, ಸುಮಲತಾ ಗೆಲುವು ಖಚಿತ: ಯಡಿಯೂರಪ್ಪ

Lingaraj Badiger
ಕೊಪ್ಪಳ: ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಸೋಲು, ಸುಮಲತಾ ಗೆಲುವು ಖಚಿತವಾದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಗಾಬರಿಗೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಶನಿವಾರ ಹೇಳಿದ್ದಾರೆ.
ಇಂದು ಕೊಪ್ಪಳದ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿಗೆ ಈಗ ಒಳ್ಳೆಯ ವಾತಾವರಣವಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲ್ಲುವುದು ಖಚಿತವಾದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಆತಂಕಕ್ಕೆ ಒಳಗಾಗಿ ಮಾನಸಿಕ ನಿಯಂತ್ರಣ ಕಳೆದುಕೊಂಡಿದ್ದಾರೆ. ನಮ್ಮ ದೇಶದ ವೀರ ಸೈನಿಕರ ಬಗ್ಗೆ ಹಗುರವಾಗಿ  ಮಾತನಾಡುತ್ತಿದ್ದಾರೆ. ಇನ್ನೂ ಸಚಿವ ರೇವಣ್ಣ ಅವರು ಮೋದಿ ಮತ್ತೆ ಪ್ರಧಾನಿ ಆದರೆ ರಾಜಕೀಯ  ನಿವೃತ್ತಿ ಹೊಂದುತ್ತೇನೆ ಎಂದು ಹೇಳುತ್ತಿದ್ದಾರೆ. ಇಂತಹ ಹಗುರವಾಗಿ ಮಾತನಾಡುವ ಮೂಲಕ ರಾಜ್ಯದಲ್ಲಿ ಮೈತ್ರಿ ಪರ ಉತ್ತಮ ವಾತಾವರಣ ಇಲ್ಲ ಎಂಬುದನ್ನು ಅವರೇ ತೋರಿಸಿಕೊಳ್ಳುತ್ತಿದ್ದಾರೆ ಎಂದು  ಟೀಕಿಸಿದರು. 
ದೇಶದ ಜನತೆ ಈಗಾಗಲೇ ತೀರ್ಮಾನ ಮಾಡಿದ್ದಾರೆ. ಈ ಬಾರಿಯೂ  ಮೋದಿ ಅವರು ಪೂರ್ಣ ಬಹುಮತದೊಂದಿಗೆ ಗೆದ್ದು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತವಾಗಿದೆ. ಇನ್ನೂ ಕೇಂದ್ರ  ಸರ್ಕಾರದ ಸಾಧನೆ, ಹಿಂದಿನ ಬಿಜೆಪಿ ಸರ್ಕಾರದ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯಗಳು ನಮ್ಮ ಗೆಲುವಿಗೆ ಸಹಕಾರಿಯಾಗಲಿವೆ. ಯುವಕರು ಸಹ ತುಂಬಾ ಉತ್ಸಾಹದಿಂದ ಮೋದಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲಾ ನಮಗೆ ದೊಡ್ಡ ಶಕ್ತಿಯಾಗಿದೆ ಎಂದು ಅವರು ಹೇಳಿದರು.
ಸಚಿವ ಎಂ.ಬಿ.ಪಾಟೀಲ್‍ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಲಿಂಗಾಯತರ ಪ್ರತ್ಯೇಕ ಧರ್ಮದ ಪರ ವಿರೋಧ ಮಾತನ್ನು ಆಡುತ್ತಿರುವುದು ಅವರಿಗೆ ಬಿಟ್ಟ ವಿಚಾರ. ಅವರು ಮಾಡುತ್ತಿರುವುದು ತಂತ್ರವೋ ಕುತಂತ್ರವೋ ತಮಗೆ ತಿಳಿದಿಲ್ಲ. ಆದರೆ ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಇದರಿಂದ  ಸ್ಪಷ್ಟವಾಗುತ್ತದೆ ಎಂದರು.
ಸುಮಲತಾ ಅಂಬರೀಶ್ ಮಾಯಾಂಗನೆ ಎಂಬ ಸಂಸದ ಶಿವರಾಮೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು , ಮೈತ್ರಿ ಅಭ್ಯರ್ಥಿ ಸೋಲುವ ಭೀತಿಯಿಂದ ಹೀಗೆಲ್ಲ ಮಾತಾಡುತ್ತಿದ್ದಾರೆ. ಸಂಸದ ಶಿವರಾಮೇಗೌಡ ಹೀಗೆಲ್ಲಾ ಹಗುರವಾಗಿ ಮಾತನಾಡುವುದಕ್ಕೆ ಹೆಸರಾಗಿದ್ದಾರೆ. ಮಂಡ್ಯದಲ್ಲಿ ಸುಮಲತಾ ಗೆಲುವು ಖಚಿತವಾಗಿದೆ.  ಹಾಗಾಗಿ ಎಲ್ಲರೂ ಒಂದೊಂದು ರೀತಿ ಮಾತನಾಡುತ್ತಿದ್ದಾರೆ ಎಂದು ಯಡಿಯೂರಪ್ಪ ವಿವರಿಸಿದರು.
SCROLL FOR NEXT