ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಹುಬ್ಬಳ್ಳಿ: ತಮ್ಮ ಸರ್ಕಾರದ ಬಾಳ್ವಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೇ ಸಮಯ ಮಿತಿ ಹಾಕಿಕೊಂಡಿದ್ದಾರೆ. ಅವರ ಟೀಕೆ, ಟಿಪ್ಪಣಿಗಳಿಗೆ ಮೇ 23ರಂದು ದೇಶದ ಜನತೆ ಉತ್ತರ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಬಾಗಲಕೋಟೆ ಮತ್ತು ಚಿಕ್ಕೋಡಿಯಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ಮೋದಿಯವರು ಮಾಹಿತಿ ತಿರುಚಿ ಮಾತನಾಡಿದ್ದಾರೆ. ಕರ್ನಾಟಕ ಸರ್ಕಾರ ಅಸಮರ್ಥ ಸರ್ಕಾರ, ಜನರ ಪರವಾಗಿ ಏನೂ ಕೆಲಸ ಮಾಡುತ್ತಿಲ್ಲ ಎಂದು ಮೋದಿಯವರು ಅಪಪ್ರಚಾರ ಮಾಡುತ್ತಿದ್ದಾರೆ.ತಮ್ಮ ಸ್ಥಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಟೀಕಿಸಿದರು.
2014ರಲ್ಲಿ ಸಂಪೂರ್ಣ ಬಹುಮತ ಮತ್ತು ಬೆಂಬಲದೊಂದಿಗೆ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಿತ್ತು.ಇಂದಿರಾಗಾಂಧಿಯವರ ನಂತರ ಸಂಪೂರ್ಣ ಸ್ವಾತಂತ್ರ್ಯ ಮೋದಿಯವರಿಗೆ ಸಿಕ್ಕಿದ್ದು, ಅವರೇಕೆ ಸದ್ವಿನಿಯೋಗ ಮಾಡಿಕೊಳ್ಳಲಿಲ್ಲ. ಕಳೆದ 5 ವರ್ಷಗಳಲ್ಲಿ ದೇಶದ ಮತ್ತು ಈ ರಾಜ್ಯದ ಜನತೆಗೆ ಏನೇನು ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅವರಲ್ಲೇನು ಇಲ್ಲ. ಅದಕ್ಕೆ ನಮ್ಮ ಮೇಲೆ ವೃಥಾ ಆರೋಪ ಮಾಡಿ ಮತದಾರರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಹುತಾತ್ಮ ಯೋಧರ ಹೆಸರಿನಲ್ಲಿ, ಸೇನೆಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಪಾಕಿಸ್ತಾನದ ಬಾಲಾಕೋಟ್ ಬಗ್ಗೆ ಇಲ್ಲಿ ಕುಳಿತ ಜನರಿಗೇನು ಗೊತ್ತಿಲ್ಲ.ದೇಶದ ಜನತೆ ಮುಂದೆ ಕೇಂದ್ರ ಸರ್ಕಾರ ಮತ್ತು ಮೋದಿಯವರು ಸಂಪೂರ್ಣ ವಾಸ್ತವ ಸುದ್ದಿಯನ್ನು ನೀಡಲೇ ಇಲ್ಲ. ಮಾಧ್ಯಮದಲ್ಲಿ ಬಂದ ಸುದ್ದಿಯನ್ನು ಕೇಳಿ, ನೋಡಿ ನಾವೆಲ್ಲ ತಿಳಿದುಕೊಂಡಿದ್ದೇವಷ್ಟೆ ಎಂದರು.
ಕಳೆದ 5 ವರ್ಷಗಳ ಹಳೆಯ ಸರಕುಗಳನ್ನು ಬದಿಗಿಟ್ಟು ಹೊಸ ವಿಷಯಗಳನ್ನು ಪ್ರಸ್ತಾಪಿಸಿ ಜನರನ್ನು ಮರಳು ಮಾಡಲು ಹೊರಟಿದ್ದಾರೆ ಮೋದಿಯವರು ಎಂದು ದೂರಿದರು.
ತಾವು ದೇಶವಿರೋಧಿ ಎಂಬ ಮೋದಿಯವರ ಹೇಳಿಕೆ ಅಪ್ರಬುದ್ಧವಾದುದು. ದೇಶಭಕ್ತಿಯ ಬಗ್ಗೆ ಮೋದಿಯವರಿಂದ ಕಲಿಯಬೇಕಾದ್ದು ಏನೂ ಇಲ್ಲ. ದೇವೇಗೌಡರು ಪ್ರಧಾನಿಯಾಗಿದ್ದ 10 ತಿಂಗಳಲ್ಲಿ ಕಾಶ್ಮೀರದಲ್ಲಿ ಯಾವುದೇ ಬಾಂಬ್ ದಾಳಿಗಳು ಆಗಿರಲಿಲ್ಲ. ಅದು ನಮ್ಮ ಪರಂಪರೆ. ಮೋದಿಯವರು ಏನೇನೋ ಮಾತನಾಡುತ್ತಾರೆಂದು ನಾನು ಏನೂ ಹೇಳಲು ಹೋಗುವುದಿಲ್ಲ. ನನಗೆ ಬ್ರಾಂಡ್ ನೀಡುವ ಯಾವುದೇ ಅಧಿಕಾರ ಮೋದಿಯವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಗೆ ರಾಜ್ಯ ಸರ್ಕಾರ 900 ಕೋಟಿ ರೂಪಾಯಿ ನೀಡಿದೆ. ಉತ್ತರ ಕರ್ನಾಟಕ ಭಾಗವನ್ನು ನಮ್ಮ ಮೈತ್ರಿ ಸರ್ಕಾರ ಕಡೆಗಣಿಸಿಲ್ಲ. ಕಳೆದ ಬಜೆಟ್ ನಲ್ಲಿ ಸಾವಿರಾರು ಕೋಟಿ ರೂಪಾಯಿ ನಿಗದಿಪಡಿಸಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ 8 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದೇವೆ, ನಾನು ರಿಮೋಟ್ ಮುಖ್ಯಮಂತ್ರಿಯಾಗುತ್ತಿದ್ದರೆ ಇಷ್ಟೊಂದು ಕೆಲಸ ಮಾಡಲು ಹೇಗೆ ಸಾಧ್ಯವಾಗುತ್ತಿತ್ತು ಎಂದು ಕೇಳಿದರು.
ರಾಜ್ಯದ ಮೈತ್ರಿ ಸರ್ಕಾರ ಮತ್ತು ನಮ್ಮನ್ನು ಟೀಕಿಸುವ ಸರ್ಕಾರ ನರೇಗಾ ಯೋಜನೆಯಡಿ ಇದುವರೆಗೆ ಹಣ ಬಿಡುಗಡೆ ಮಾಡಲಿಲ್ಲವೇಕೆ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕಾಮಗಾರಿ ಏನಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.