ಕರ್ನಾಟಕ

ಚೆನ್ನಮ್ಮನವರ ಬಗ್ಗೆ ನೀಡಿದ್ದ ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್

Sumana Upadhyaya

ಧಾರವಾಡ: ತಮ್ಮ ತಾಯಿಯ ಬಗ್ಗೆ ಮಾತನಾಡಿರುವುದು ಬೇಸರ ತಂದಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಹೇಳಿದ ನಂತರ ಕೂಡ  ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಜಿಲ್ಲೆಯ ಅಣ್ಣಿಗೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಿನ್ನೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ಚೆನ್ನಮ್ಮನವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಬಹುದಿತ್ತು ಎಂದು ನಾನು ಹೇಳಿದ್ದರಲ್ಲಿ ತಪ್ಪೇನಿದೆ, ಮುಖ್ಯಮಂತ್ರಿ ಕುಮಾರಸ್ವಾಮಿಯವರು ನನ್ನ ಮಾತಿಗೆ ಖುಷಿ ಪಡುವುದು ಬಿಟ್ಟು ಬೇಸರಪಟ್ಟುಕೊಳ್ಳುವುದು ಏಕೆ, ದೇವೇಗೌಡರ ಕುಟುಂಬ ಸದಸ್ಯರು, ನೆಂಟರು ಎಲ್ಲರೂ ರಾಜಕೀಯದಲ್ಲಿದ್ದಾರೆ. ಇದು ಸಂತುಷ್ಟ ಕುಟುಂಬ ಆಗಬೇಕಾದರೆ ಚನ್ನಮ್ಮರನ್ನು ರಾಜ್ಯಸಭಾ ಸದಸ್ಯರನ್ನಾಗಿಸಬೇಕು ಎಂದು ಸಲಹೆ ಕೊಟ್ಟಿದೆ. ನಾನು ಹೀಗೆ ಹೇಳಿದ್ದು ನೋವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರಂತೆ. ಆದರೆ ನಾನು ಹೇಳಿದ್ದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿಯವರ ಕುಟುಂಬವಿಡೀ ರಾಜಕಾರಣದಲ್ಲಿದೆ. ಆದರೆ ಈ ಬಾರಿ ಮತದಾರರು ಅವರ ಕುಟುಂಬ ರಾಜಕೀಯಕ್ಕೆ ಅಂತ್ಯ ಹಾಡಲಿದ್ದಾರೆ. ನಿಖಿಲ್, ಪ್ರಜ್ವಲ್ ಮನೆಗೆ ಹೋಗುತ್ತಾರೆ. ನಿಖಿಲ್ ಎಲ್ಲಿದ್ದೀಯಪ್ಪ ಎಂದು ಹುಡುಕಬೇಕಾಗುತ್ತದೆ. ನಾನು ಹಾಸಿಗೆ ಹಿಡಿಯುವವರೆಗೂ ರಾಜಕೀಯ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಕೇಳಿದ್ರೆ, ಇವರಿಗೆ ಅಧಿಕಾರದ ದಾಹ ಎಷ್ಟಿದೆ ಎಂಬುದು ಇದರಿಂದ ಅರ್ಥವಾಗುತ್ತದೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದ್ರು.
SCROLL FOR NEXT