ಕರ್ನಾಟಕ

ರಾಯಚೂರಲ್ಲಿ ಇವಿಎಂ ಎಡವಟ್ಟು, ಬಿಜೆಪಿ ಅಭ್ಯರ್ಥಿಯ ಚಿತ್ರದ ಮುಂದೆ ಶಾಯಿ ಗುರುತು ಪತ್ತೆ

Raghavendra Adiga
ರಾಯಚೂರು: ಆಘಾತಕಾರಿ ಘಟನೆಯಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಇಡಲಾಗಿದ್ದ ಇವಿಎಂ ಮತಯಂತ್ರದ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯರ್ಥಿಯಾದ ರಾಜಾ ಅಮರೇಶ್ವರ ನಾಯಕ್  ಚಿತ್ರದ ಮುಂದೆ ನೀಲಿ ಶಾಯಿ ಬಣ್ಣವಿರುವುದು ಪತ್ತೆಯಾಗಿದ್ದು ಅನುಮಾನಕ್ಕೆ ಎಡೆಮಾಡಿದೆ.
ಕಾರವಾರದಲ್ಲಿ ಓರ್ವ ವ್ಯಕ್ತಿ ಮತ ಹಾಕುವುದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದ ಘಟನೆ ಬೆನ್ನಲ್ಲೇ ರಾಯಚೂರಿನಲ್ಲಿ ಈ ಘಟನೆ ಬೆಳಕು ಕಂಡಿದೆ. 1951 ರ ಜನಪ್ರತಿನಿಧಿ ಕಾಯಿದೆ ಉಲ್ಲಂಘನೆಯಾಗಿರುವ ಈ ಪ್ರಕರಣ ಲಿಂಗಸಗೂರು ವಿಧಾನಸಭೆ ಕ್ಷೇತ್ರದ ಮತಗಟ್ಟೆ 17 ನಲ್ಲಿ ನಡೆದಿದೆ.
ಬಿಜೆಪಿ ಅಭ್ಯರ್ಥಿಯ ಚಿತ್ರದ ಮುಂದೆ ಶಾಯಿ ಗುರುತಿರುವ ಇವಿಎಂ ಚಿತ್ರದ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಬೆಳಗಿನ 11 ಗಂಟೆಯಿಂದ  ಹರಿದಾಡಲು ಪ್ರಾರಂಭಿಸಿದ್ದು ಈ ಸಂಬಂಧ ಹಟ್ಟಿ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಿಟರ್ನಿಂಗ್ ಆಫೀಸರ್ (ಆರ್.ಒ) ಶರತ್ ಬಿ. ಮತಗಟ್ಟೆ ವಿವರಗಳನ್ನು ಕೇಳಿದ್ದರು. ಇದಾಗಿ ಅರ್ಧ ಗಂಟೆಯ ಬಳಿಕ ರಾಯಚೂರು ಜಿಲ್ಲಾಧಿಕಾರಿಗಳು ಅಚಾತುರ್ಯ ನಡೆದ ಮತಗಟ್ಟೆಯ ಪತ್ತೆಯಾಗಿದ್ದು ವೀಡಿಯೋ ಮಾಡಿದ ವ್ಯಕ್ತಿಯನ್ನು ಬಂಧಿಸಿದ್ದಾಗಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಆದರೆ ಇವಿಎಂ ನಲ್ಲಿ ನೀಲಿ ಗುರುತು ಬಂದದ್ದು ಹೇಗೆ ಎನ್ನುವುದನ್ನು ಅವರು ತಿಳಿಸಿಲ್ಲ, ಅಲ್ಲದೆ ಆರೋಪಿಯ ವಿವರವನ್ನೂ ಸಹ ಅವರು ಬಹಿರಂಗಪಡಿಸಿಲ್ಲ.
SCROLL FOR NEXT