ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ
ಬೆಳಗಾವಿ: ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಓರ್ವ ಗೋಮುಖ ವ್ಯಾಘ್ರ , ಪಕ್ಷದಲ್ಲಿನ ಭಿನ್ನಮತಕ್ಕೆ ಪ್ರಚೋದನೆ ನೀಡಿದ್ದೇ ಅವರು ಎಂದು ಸಹೋದರ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವನಾಗಿ ಆರಾಮವಾಗಿದ್ದೆ. ಆದರೆ ಸತೀಶ್ ಜಾರಕಿಹೊಳಿ ಅವರು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕೆಲವರಿಗೆ ಪ್ರಚೋದನೆ ನೀಡಿದರು. ಅಷ್ಟೇ ಅಲ್ಲದೆ ನಾನು ಮಂತ್ರಿಯಾಗಿದ್ದಕ್ಕೆ ಮನೆಗೆ ಬಂದು ಕಣ್ಣೀರು ಹಾಕಿದರು. ಆ ಮೂಲಕ ಪಕ್ಷದಲ್ಲಿ ಭಿನ್ನಮತ ಆರಂಭಕ್ಕೆ ನಾಂದಿ ಹಾಡಲು ಅವರೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.
ತಾವು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿದ್ದೆ. ಸತೀಶ್ ಜಾರಕಿಹೊಳಿ ಅವರಂತವರು ಬಂದು ಪಕ್ಷ ಹಾಳಾಯಿತು. ಈ ಹಿಂದೆ ಭಾರೀ ನೋವಲ್ಲಿ ತಮ್ಮ ಮುಂದೆ ಕಣ್ಣೀರು ಹಾಕಿದ್ದರು. ಅವರ ಪರಿಸ್ಥಿತಿಗೆ ಕರಗಿ ಮುಖ್ಯಮಂತ್ರಿ ಮಾಡಬೇಕು ಎಂಬ ಹೇಳಿಕೆ ನೀಡಿದ್ದೆ. ಈಗ ತಮಗೆ ಮೋಸ ಮಾಡಿ ಮಂತ್ರಿಯಾಗಿದ್ದಾರೆ, ಮುಂದೆ ಇದಕ್ಕೆ ಸರಿಯಾದ ಉತ್ತರ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿಕೆಯಂತೆ ತಮ್ಮ ಪರಿಸ್ಥಿತಿ ತೋಳ ಬಂತು ತೋಳ ಎನ್ನುವ ರೀತಿ ಆಗಿರುವುದು ನಿಜ. ಪಕ್ಷದ ನಾಯಕರ ವಿರುದ್ಧ ಮಾತನಾಡಿದರೆ ತಾವೊಬ್ಬರೇ ಕೆಟ್ಟವರಾಗ ಬೇಕಾಗುತ್ತದೆ ಎಂದು ಸುಮ್ಮನೇ ಇದ್ದೇನೆ. ಈ ಹಿಂದೆಯೇ ತಾವು ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇ, ಆದರೆ ತಮ್ಮ ಬೆಂಬಲಿಗರಿಂದಾಗಿ ವಿಳಂಬವಾಯಿತು ಎಂದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಡೆಯುವ ಉಪಚುನಾವಣೆಯಲ್ಲಿ ಮಾತ್ರ ಗೋಕಾಕ್ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಬಳಿಕ ನಡೆಯುವ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರವನ್ನು ಲಖನ್ ಜಾರಕಿಹೊಳಿ ಅವರಿಗೆ ಬಿಟ್ಟು, ಯಮಕನಮರಡಿ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತೇನೆ ಎಂದು ಹೇಳುವ ಮೂಲಕ ಸತೀಶ್ ಜಾರಕಿಹೊಳಿ ವಿರುದ್ಧ ಕಣಕ್ಕಿಳಿಯುವ ಸಂದೇಶ ರವಾನಿಸಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಆಕೆಯ ಬಗ್ಗೆ ಮಾತನಾಡುವುದು ಬಹಳ ಇದೆ. ರಾಜೀನಾಮೆ ಪ್ರಕ್ರಿಯೆ ಮುಗಿದ ಮೇಲೆ ಆಕೆಯ ಕುಟುಂಬ ಹೇಗಿತ್ತು? ಹೇಗೆ ಬೆಳೆದಳು ಎನ್ನುವುದನ್ನು ಬಹಿರಂಗವಾಗಿ ಹೇಳುತ್ತೇನೆ ಎಂದು ಹೇಳುವ ಮೂಲಕ ಹೆಬ್ಬಾಳ್ಕರ್ ಜಾತಕ ಬಯಲು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಂಪ್ಲಿ ಶಾಸಕ ಗಣೇಶ್ ಅವರಿಗೆ ಜಾಮೀನು ಸಿಕ್ಕಿದ್ದು ಸಂತೋಷ ತಂದಿದೆ. ರಾಜಕೀಯ ದುರುದ್ದೇಶದಿಂದ ಈ ಘಟನೆ ನಡೆದಿತ್ತು ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದರು.
ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ , ಅವನೊಬ್ಬ ಜವಾಬ್ದಾರಿ ಇಲ್ಲದ ವ್ಯಕ್ತಿ, ಅಪ್ಪಟ ಸುಳ್ಳುಗಾರ, ಇವತ್ತು ಒಂದು ಹೇಳುತ್ತಾನೆ, ನಾಳೆ ಇನ್ನೊಂದು ಹೇಳುತ್ತಾನೆ. ರಮೇಶ ಜಾರಕಿಹೊಳಿ ಹೇಳಿಕೆಯನ್ನು ತಾವು ಗಂಭೀರವಾಗಿ ಪರಿಗಣಿಸುವುದಿಲ್ಲ ಏಕೆಂದರೆ, ಆತ ಅಪ್ಪಟ ಸುಳ್ಳುಗಾರ. ಬದ್ಧತೆ ಇಲ್ಲದ ಶಾಸಕ ಎಂದು ಹೇಳಿದರು.
ಪಿಎಲ್ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಭಿನ್ನಮತ ಶಮನ ಸಭೆ ನಡೆಯಿತು. ಡಿ ಕೆ ಶಿವಕುಮಾರ್ ಜಿಲ್ಲೆಯ ರಾಜಕಾರಣದಲ್ಲಿ ಹಸ್ತಕ್ಷೇಪದ ಬಗ್ಗೆ ರಮೇಶ ಜಾರಕಿಹೊಳಿ ಜತೆ ಮಾತುಕತೆ ನಡೆದಿದ್ದು ನಿಜ. ಆದರೆ ಈಗ ಈ ರೀತಿ ಮಾತನಾಡುತ್ತಿದ್ದಾನೆ. ಆತ ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ತಾವು ಅಳುವುದಿಲ್ಲ ಹಾಗೂ ತಮಗೂ ಯಾವುದೇ ನಷ್ಟವಿಲ್ಲ ಎಂದು ಹೇಳಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics